ನಮಸ್ತೆ ಪ್ರಿಯ ಓದುಗರೇ, ಅಡುಗೆ ಮನೆಯ ಒಗ್ಗರಣೆ ಡಬ್ಬಿಯಲ್ಲಿ ಇರುವ ಪದಾರ್ಥಗಳನ್ನು ಔಷಧಗಳನ್ನಾಗಿ ಮಾಡಿಕೊಂಡರೆ ಅಡುಗೆ ಮನೆಯೇ ಆಸ್ಪತ್ರೆಯಾಗುತ್ತದೆ; ಜೊತೆಗೆ ಆರೋಗ್ಯ ವೃದ್ಧಿಯೂ ಆಗುತ್ತದೆ. ಹಾಗೆ ಒಗ್ಗರಣೆ ಡಬ್ಬಿಯಲ್ಲಿ ಇರುವ ಅದ್ಭುತ ಔಷಧ ಕೊತ್ತುಂಬರಿ ಬೀಜ. ಜೀರ್ಣಕ್ಕೆ ಲಘುವಾಗಿದ್ದು ಸ್ನಿಗ್ಧ ಗುಣವನ್ನು ಹೊಂದಿದ್ದು ವಾತ, ಪಿತ್ತ, ಕಫ ಈ ಮೂರೂ ದೋಷಗಳನ್ನು ನಿಯಂತ್ರಿಸುವ ಗುಣವನ್ನು ಹೊಂದಿರುವ ಕೊತ್ತಂಬರಿ ಬೀಜವನ್ನು ಹಲವಾರು ಕಾಯಿಲೆಗಳಲ್ಲಿ ಔಷಧವಾಗಿ ಬಳಕೆ ಮಾಡಬಹುದು ಎಂಬುದನ್ನು ಆಯುರ್ವೇದದಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ. ಇತ್ತೀಚಿನ ಸಂಶೋಧನೆಗಳು ಕೂಡ ಕೊತ್ತುಂಬರಿ ಬೀಜವು ಮಧುಮೇಹ, ಬೊಜ್ಜು, ಕೊಲೆಸ್ಟ್ರಾಲ್ ಸಮಸ್ಯೆಗಳಲ್ಲಿ ಉತ್ತಮ ಔಷಧವಾಗಿ ಬಳಕೆಗೆ ಯೋಗ್ಯ ಎಂದು ಹೇಳುತ್ತಿವೆ. ಜತೆಗೆ ಇದರಲ್ಲಿ ದೇಹದ ಆರೋಗ್ಯವನ್ನು ಕಾಪಾಡುವ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಯುವ ಆಂಟಿಆಕ್ಸಿಡೆಂಟ್ ಗಳು ಹೇರಳವಾಗಿವೆ ಎಂದು ಹೇಳುತ್ತಿವೆ. ಯಾವಾಗಲೂ ದೇಹದಲ್ಲಿ ಉಷ್ಣತೆ ಅಧಿಕವಾಗಿರುತ್ತದೆ ಎಂದೋ, ಉಷ್ಣ ಶರೀರ ಎಂದೋ ಅಳಲು ತೋಡಿಕೊ ಳ್ಳತ್ತಿರುವವರಿಗೆ ಇದು ಒಂದು ರೀತಿಯ ವರದಾನ.

ಆಯುರ್ವೇದ ಗ್ರಂಥಗಳಲ್ಲಿ ಧಾನ್ಯಕ ಹಿಮ ಎಂಬ ಒಂದು ಪಾನೀಯದ ಬಗ್ಗೆ ಹೇಳುತ್ತಾರೆ. ಇದು ಜ್ವರ, ಕೈಕಾಲುಗಳಲ್ಲಿ ಉರಿ, ಗಂಟಲು ಉರಿ, ಎದೆ ಉರಿಗಳಲ್ಲಿ ಅತ್ಯಂತ ಪ್ರಾಯೋಜಕ. ಸುಮಾರು ೧೦ ಗ್ರಾಂ ಗಳಷ್ಟು ಕೊತ್ತುಂಬರಿ ಬೀಜವನ್ನು ತೆಗೆದುಕೊಂಡು ಒಂದೆರೆಡು ಸುತ್ತು ಮಿಕ್ಸಿ ಮಾಡಿ ಸುಮಾರು ೬೦ ಮಿಲಿ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಬೇಕು, ಮರುದಿನ ಬೆಳಿಗ್ಗೆ ಅದನ್ನು ಸೋಸಿ ಆದಕ್ಕೆ ಸಾವಯುವ ಸಕ್ಕರೆಯನ್ನು ಸ್ವಲ್ಪ ಹಾಕಿ ತೆಗೆದುಕೊಂಡರೆ ಇದೇ ದಾನ್ಯಕ ಹಿಮ. ಸಾವಯುವ ಸಕ್ಕರೆ ಸಿಗದಿದ್ದರೆ ಜೋನಿ ಬೆಲ್ಲವನ್ನ ಬಳಕೆ ಮಾಡಬಹುದು. ಹೆಚ್ಚಾದ ಪಿತ್ತದ ಕಾರಣದಿಂದಆಗುತ್ತಿರುವ ಸಮಸ್ಯೆಗಳು ಈ ಪಾನೀಯವನ್ನು ಸೇವಿಸುವುದರಿಂದ ಹತೋಟಿಗೆ ಬರುತ್ತವೆ. ಇದನ್ನು ನಿರಂತರವಾಗಿ ಹದಿನೈದರಿಂದ ಇಪ್ಪತ್ತು ದಿನಗಳ ವರೆಗೆ ತೆಗೆದು ಕೊಳ್ಳಬಹುದು. ಜ್ವರ ಬಂದಾಗ ಬಹಳಷ್ಟು ಜನರಲ್ಲಿ ದೇಹದಲ್ಲಿ ಉರಿ, ಬಾಯಿಹುಣ್ಣು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ಜ್ವರದ ಸಂದರ್ಭದಲ್ಲಿ ತೆಗೆದುಕೊಳ್ಳುವ ವಿವಿಧ ಔಷಧಗಳ ಕಾರಣದಿಂದಲೂ ಇಂಥ ಸಮಸ್ಯೆಗಳು ಉಂಟಾಗುತ್ತವೆ. ಹಾಗೆ ಆದಾಗ ಧನ್ಯಕ ಹಿಮವನ್ನು ಸೇವಿಸುವುದು ಸೂಕ್ತ. ಇದು ಈ ಸಮಸ್ಯೆಗಳನ್ನು ಹೋಗಲಾಡಿಸುವುದಲ್ಲದೆ ಜ್ವರವನ್ನು ಕೂಡ ಗುಣಪಡಿಸುತ್ತದೆ. ಜೊತೆಗೆ ಜೀರ್ಣ ಕ್ರಿಯೆಯನ್ನು ಹೆಚ್ಚಿಸಿ ಬಾಯಿರುಚಿಯನ್ನು ವರ್ಧಿಸುತ್ತದೆ. ಉಷ್ಣದ ಕಾರಣದಿಂದ ಬೇಧಿಯಾಗುತ್ತಿದ್ದರೆ ಅಥವಾ ಪದೇ ಪದೇ ಸಿಂಬಳದಂತೆ ಬೇಧಿಯಾಗುತ್ತುದ್ದರೆ ಕೊತ್ತಂಬರಿ ಬೀಜ ಮತ್ತು ಭದ್ರ ಮುಷ್ಟಿಗಳನ್ನು ಒಂದೊಂದು ಚಮಚ ಹಾಕಿ ಅದಕ್ಕೆ ೪ ಲೋಟ ನೀರು ಹಾಕಿ ಅದು ಒಂದು ಲೋಟಕ್ಕೆ ಆಗುವಷ್ಟು ಬತ್ತಿಸಿ ಕುಡಿಯಬೇಕು. ಈ ರೀತಿ ದಿನದಲ್ಲಿ ಏರೆಡರಿಂದ ಮೂರು ಬಾರಿ ಸೇವಿಸಿದರೆ ಇಂತಹ ಬೇಧಿ ಹತೋಟಿಗೆ ಬರುತ್ತದೆ. ಅಜೀರ್ಣದ ಸಮಸ್ಯೆ ಅಂದರೆ ಊಟಾ ಮಾಡಿದ ನಂತರ ಹೊಟ್ಟೆ ಭಾರ, ಸರಿಯಾಗಿ ಹಸಿವೆ ಆಗದೆ ಇರುವುದು ಮುಂತಾದ ಸಮಸ್ಯೆಗಳನ್ನು ಅನುಭವಿಸುವವರು ಮುಷ್ಟಿಯ ಬದಲಿಗೆ ಶುಂಠಿಯನ್ನು ಹಾಕಿ ಇದೇ ರೀತಿ ಕಷಾಯ ಮಾಡಿ ಕುಡಿಯಬೇಕು. ಅತಿಯಾಗಿ ಬಾಯಾರಿಕೆಯನ್ನು ಅನುಭವಿಸುವವರು ದಿನಕ್ಕೊಮ್ಮೆ ಕೊತ್ತಂಬರಿ ಬೀಜದ ಕಷಾಯವನ್ನು ಕುಡಿಯಬೇಕು.

ಇಂದು ಗ್ಯಾಸ್ಟೈಟಿಸ್ ಸಮಸ್ಯೆ ಇಲ್ಲದವರನ್ನು ಹುಡುಕುವಷ್ಟು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ನಿರಂತರವಾಗಿ ಔಷಧ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಈ ಸಮಸ್ಯೆಗೆ ಔಷಧ ತೆಗೆದುಕೊಳ್ಳುವ ಮೊದಲು ಕೆಲ ದಿನಗಳ ಕಾಲಾವಾದರೂ ಕೊತ್ತಂಬರಿ ಬೀಜ, ಜೀರಿಗೆ ಮತ್ತು ಶುಂಠಿಗಳ ಕಷಾಯವನ್ನು ಸೇವಿಸುವುದು ಒಳ್ಳೆಯದು. ಈ ಕಷಾಯವನ್ನು ದಿನದಲ್ಲಿ ಒಂದೆರೆಡು ಬಾರಿ ಸೇವಿಸುವುದರಿಂದ ಅಜೀರ್ಣ, ಆಮಶಂಕೆ, ಹೊಟ್ಟೆ ಉಬ್ಬರ ಮತ್ತು ಆಲಸ್ಯದ ಸಮಸ್ಯೆಗಳು ಗುಣವಾಗುತ್ತವೆ. ಆಮವಾತ ಅಂದರೆ ರುಮಾಟೈ ಡ್ ಆರ್ಥ್ರೈಟಸ್ ಸಮಸ್ಯೆಯಿಂದ ಬಳಲುತ್ತಿರುವವರು ಕೊತ್ತಂಬರಿ ಬೀಜ, ಶುಂಠಿ ಮತ್ತು ಔಡಲ ಗಿಡದ ಬೇರುಗಳನ್ನು ಐದೈದು ಗ್ರಾಂ ಗಳಷ್ಟು ತೆಗೆದುಕೊಂಡು ಅದಕ್ಕೆ ನಾಲ್ಕು ಲೋಟ ನೀರು ಹಾಕಿ ಒಂದು ಲೋಟಕ್ಕೆ ಬತ್ತಿ ಸಿ ನಿತ್ಯವೂ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಎಂದು ಆಯುರ್ವೇದ ಹೇಳುತ್ತದೆ. ಕಣ್ಣುಗಳಲ್ಲಿ ಉರಿ ಅಥವಾ ಕಣ್ಣು ಬೇನೆ ಇದ್ದರೆ ರಾತ್ರಿ ಕೊತ್ತಂಬರಿ ಬೀಜದ ಕಷಾಯ ಮಾಡಿಟ್ಟು ಬೆಳಿಗ್ಗೆ ಅದನ್ನು ಸೋಸಿ ಆ ನೀರಿನಿಂದ ಕಣ್ಣುಗಳನ್ನು ಪದೇ ಪದೇ ತೊಳೆಯಬೇಕು. ಇಷ್ಟೆಲ್ಲಾ ಅದ್ಭುತ ಗುಣಗಳಿದ್ದರೂ ಕೊತ್ತಂಬರಿ ಬೀಜವನ್ನು ದಿನಕ್ಕೆ ಒಟ್ಟು ಮೂರ್ನಾಲ್ಕು ಚಮಚಗಳಿಗಿಂತ ಹೆಚ್ಚು ಸೇವಿಸುವುದು ಸೂಕ್ತವಲ್ಲ. ಅತಿಯಾಗಿ ಬಳಸಿದರೆ ಇದು ವೀರ್ಯ ಹಾನಿಗೂ ಕಾರಣ ಆಗಬಲ್ಲದು. ಒಟ್ಟಿನಲ್ಲಿ ಅಡುಗೆ ಮನೆಯಲ್ಲಿ ಸದಾ ಇರುವ ಇಂತಹ ಪದಾರ್ಥಗಳನ್ನು ನಿತ್ಯವೂ ಬಳಸಿ ನಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳೋಣ. ಶುಭದಿನ.

Leave a Reply

Your email address will not be published. Required fields are marked *