ನಮಸ್ತೆ ನಮ್ಮ ಪ್ರಿಯ ಓದುಗರೇ, ಇಂದು ಧನುರ್ಮಾಸ ಆರಂಭ. ಶಿವ ಅಭಿಷೇಕ ಪ್ರಿಯನಾದರೆ, ವಿಷ್ಣು ಅಲಂಕಾರ ಪ್ರಿಯ. ವಿಷ್ಣುವಿಗೆ ಈ ಧನುರ್ ಮಾಸದಲ್ಲಿ ಸೂರ್ಯೋದಯಕ್ಕೆ ಮೊದಲೇ ಪ್ರತಿದಿನ ಸಹಸ್ರ ನಾಮಗಳಿಂದ ಅರ್ಚನೆ ಮಾಡಿ ಪೂಜಿಸಬೇಕು. ಈ ಮಾಸದಲ್ಲಿ ಮೊದಲ 15 ದಿನಗಳ ಕಾಲ ಸಕ್ಕರೆ ಅಥವಾ ಬೆಲ್ಲ, ಅಕ್ಕಿ, ಹೆಸರುಬೇಳೆ ಬೆರೆಸಿ ಸಿಹಿ ಪೊಂಗಲ್ ಮಾಡಿ ಮಹಾವಿಷ್ಣು ವಿಗೆ ನೈವೇದ್ಯ ಮಾಡಬೇಕು. ಉಳಿದ 15 ದಿನ ಅಕ್ಕಿ, ಹೆಸರುಬೇಳೆ, ಜೀರಿಗೆ, ಮೆಣಸು, ಉಪ್ಪು ಬೆರೆಸಿ ಖಾರದ ಪೊಂಗಲ್ ಮಾಡಿ ನೈವೇದ್ಯ ಮಾಡಬೇಕು. ಈ ವ್ರತವನ್ನು ಒಂದು ತಿಂಗಳು ಮಾಡಲು ಆಗದೇ ಇರುವವರು 15 ಅಥವಾ 7 ದಿನಗಳಾದರೂ ಮಾಡಬಹುದು. ವ್ರತ ಮಾಡುವಾಗ ಸಸ್ಯಾಹಾರವನ್ನು ಸೇವಿಸಬೇಕು ಹಾಗೂ ಬ್ರಹ್ಮ ಚರ್ಯವನ್ನು ಪಾಲಿಸಬೇಕು. ವ್ರತ ಪ್ರಾರಂಭ ಆದದ್ದು ಹೇಗೆ? ಒಮ್ಮೆ ಬ್ರಹ್ಮ ದೇವನು ಹಂಸ ಪಕ್ಷಿಯ ಅವತಾರದಲ್ಲಿ ಲೋಕಸಂಚಾರ ಮಾಡುತ್ತಿದ್ದ. ಆ ಸಮಯದಲ್ಲಿ ಸೂರ್ಯದೇವ ಹೆಚ್ಚಿನ ಬೆಳಕನ್ನು ಮತ್ತು ಶಾಖವನ್ನು ಬ್ರಹ್ಮ (ಹಂಸ) ನ ಮೇಲೆ ಪ್ರಯೋಗಿಸಿದ. ಇದರಿಂದ ಕೋಪಗೊಂಡ ಬ್ರಹ್ಮದೇವ ‘ ನಿನ್ನ ತೇಜೋಬಲ ಕ್ಷೀಣಿಸಲಿ’ ಎಂದು ಸೂರ್ಯದೇವನಿಗೆ ಶಾಪ ಕೊಟ್ಟ. ತಕ್ಷಣ ಸೂರ್ಯ ಕಾಂತಿ ಹೀನನಾಗಿ ತನ್ನ ಪ್ರಕಾಶವನ್ನು ಕಳೆದುಕೊಂಡ. ಇದರಿಂದ ಭೂಲೋಕದಲ್ಲಿ ಅಲ್ಲೋಲ ಕಲ್ಲೋಲವಾಯಿತು.
ಸೂರ್ಯನಿಲ್ಲದೆ ಜಪ ತಪ, ಹೋಮ ಹವನಗಳು ನಿಂತು ಹೋದವು. ದೇವತೆಗಳ ಮತ್ತು ಋಷಿಗಳ ನಿತ್ಯ ಕಾರ್ಯಗಳಿಗೆ ತೊಂದರೆ ಆಯಿತು. ಹಲವು ವರ್ಷಗಳ ಕಾಲ ದೇವತೆಗಳು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದರು. ಬ್ರಹ್ಮ ಪ್ರತ್ಯಕ್ಷನಾದ. ‘ ಸೂರ್ಯನಿಗೆ ಕೊಟ್ಟ ಶಾಪ ವಿಮೋಚನೆ ಮಾಡು ‘ ಎಂದು ಕೇಳಿದರು. ‘ ಸೂರ್ಯ ಧನುರ್ಮಾಸದಲ್ಲಿ ಮೊದಲ ಜಾವದಲ್ಲಿ ವಿಷ್ಣುವನ್ನು ಪೂಜೆ ಮಾಡಿದರೆ ನನ್ನ ಶಾಪ ವಿಮೋಚನೆ ಆಗುವುದು ‘ ಎಂದು ಬ್ರಹ್ಮ ನುಡಿದ. ಅದರಂತೆ ಸೂರ್ಯ 16 ವರ್ಷಗಳ ಕಾಲ ಮಹಾವಿಷ್ಣುವಿನ ಪೂಜೆ ಮಾಡಿ ತನ್ನ ತೇಜಸ್ಸು ಮತ್ತು ಶಕ್ತಿಯನ್ನು ಪಡೆದುಕೊಂಡ. ಸೂರ್ಯ ದೇವನಿಂದಲೇ ಆರಂಭವಾದ ಈ ಪೂಜೆ ನಂತರ ಲೋಕದಲ್ಲಿ ಎಲ್ಲಾ ಪ್ರಚಾರವಾಯಿತು. ಈ ಧನುರ್ಮಾಸದ ವ್ರತವನ್ನು ಅಗಸ್ತ್ಯ ಮಹರ್ಷಿ, ವಿಶ್ವಾಮಿತ್ರ, ಗೌತಮ ಮಹರ್ಷಿ, ಭೃಗು ಮಹರ್ಷಿ, ಇನ್ನೂ ಅನೇಕ ದೇವಾನುದೇವತೆಗಳು ಮಾಡಿದ್ದಾರೆ. ಅಲ್ಲದೇ, ಸಾಕ್ಷಾತ್ ಪಾರ್ವತಿಯೆ ಈ ವ್ರತವನ್ನು ಮಾಡಿ ಶಿವನನ್ನು ಮತ್ತೆ ಪತಿಯಾಗಿ ಪಡೆದಳು. ಶೂನ್ಯ ಮಾಸ – ಧನುರ್ಮಾಸದಲ್ಲಿ ವಿಪರೀತ ಚಳಿ ಇರುವುದರಿಂದ ನಮ್ಮ ದೇಹವು ಚಳಿಯಿಂದ ಧನುಸ್ಸಿನಂತೆ ಬಾಗುವುದು. ಆದ್ದರಿಂದ ಬೆಳಗಿನ ಜಾವದಲ್ಲಿ ಎದ್ದು ಈ ಧನುರ್ಮಾಸದ ವ್ರತವನ್ನು ಪ್ರತಿದಿನ ಮಾಡುವುದರಿಂದ ಪ್ರತಿದಿನವೂ ಲವಲವಿಕೆಯಿಂದ ಇರಬಹುದು. ಈ ಮಾಸವನ್ನು ಶೂನ್ಯ ಮಾಸ ಎಂದೂ ಕೆಲವರು ಪರಿಗಣಿಸುತ್ತಾರೆ. ಈ ಮಾಸದಲ್ಲಿ ಮದುವೆ, ಉಪನಯನ, ಗೃಹಪ್ರವೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದಿಲ್ಲ.
ಈ ಮಾಸದಲ್ಲಿ ತೀರ್ಥ ಕ್ಷೇತ್ರದಲ್ಲಿ ಸ್ನಾನ ಮಾಡಿ, ಅಲ್ಲಿ ಪಿತೃಗಳಿಗೆ ತರ್ಪಣ ಬಿಡುವುದರಿಂದ ಹೆಚ್ಚಿನ ಫಲ ಪಡೆಯಬಹುದು. ಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿರುವರು. ಧನುರ್ಮಾಸದಲ್ಲಿ ಸುಬ್ರಮಣ್ಯ ಷಷ್ಠಿ, ಕಾಲಭೈರವ ಅಷ್ಟಮಿ, ವೈಕುಂಠ ಏಕಾದಶಿ, ಗೀತಾ ಜಯಂತಿ, ಹನುಮಾನ್ ವ್ರತ/ಜಯಂತಿ ಮತ್ತು ದತ್ತ ಜಯಂತಿ ಬರುತ್ತವೆ. ಈ ಮಾಸವನ್ನು ‘ ಜಯಂತಿಗಳ ಮಾಸ ‘ ಎಂದೂ ಕರೆಯಬಹುದು. ಯಾರ್ಯಾರು ಈ ವ್ರತವನ್ನು ಮಾಡಿದರೆ ಹೆಚ್ಚಿನ ಫಲ? – ಧನುರ್ಮಾಸದಲ್ಲಿ ಜನಿಸಿದ ವ್ಯಕ್ತಿಗಳ ಜಾತಕದಲ್ಲಿ ರವಿ ಗ್ರಹವು ಧನುಸ್ಸು ರಾಶಿಯಲ್ಲಿ ಇರುತ್ತಾನೆ. ಇಂತಹ ವ್ಯಕ್ತಿಗಳು ಈ ವ್ರತವನ್ನು ಮಾಡಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಜಾತಕದಲ್ಲಿ ರವಿ ಮತ್ತು ಗುರು ಗ್ರಹವು ಒಂದೇ ರಾಶಿಯಲ್ಲಿದ್ದರೆ ಅಂಥವರು ಈ ಧನುರ್ಮಾಸದ ಪೂಜೆಯನ್ನು ಮಾಡಿದರೆ ಬುದ್ಧಿಶಕ್ತಿ ಹೆಚ್ಚುತ್ತದೆ. ಗರ್ಭಿಣಿಯರು ಈ ವ್ರತವನ್ನು ಮಾಡಿದರೆ ಉತ್ತಮವಾದ ಸಂತಾನ ಪ್ರಾಪ್ತಿ ಆಗುತ್ತದೆ. ಸಂತಾನ ಭಾಗ್ಯ ಇಲ್ಲದವರು ಈ ವ್ರತವನ್ನು ಮಾಡಿದರೆ ಸಂತಾನ ಯೋಗ ಬರುತ್ತದೆ. ವಿವಾಹ ಆಗದೆ ಇರುವ ಕನ್ಯೆಯರು ಈ ವ್ರತವನ್ನು ಮಾಡಿದರೆ ಶೀಗ್ರ ವಿವಾಹವಾಗುವುದು. ವಿದ್ಯಾರ್ಥಿಗಳು ವ್ರತ ಮಾಡಿದರೆ ಒಳ್ಳೆಯ ವಿದ್ಯೆ ಪಡೆಯಬಹುದು. ಶುಭದಿನ.