ನಮಸ್ತೆ ಪ್ರಿಯ ಓದುಗರೇ, ಶಕ್ತಿ ರೂಪಿನಿ ಆದ ಜಗನ್ಮಾತೆ ತನ್ನ ಭಕ್ತರು ಕಷ್ಟದಲ್ಲಿ ಇದ್ದರೆ ಅಂತ ಗೊತ್ತಾದ್ರೆ ಸಾಕು ಅದ ತಾಯಿ ಯಾವುದಾದರೂ ರೂಪದಲ್ಲಿ ಅವತಾರವನ್ನೆತ್ತಿ ತನ್ನನ್ನು ನಂಬಿದವರನ್ನು ಬೆಂಬಿಡದೆ ಕಾಪಾಡುತ್ತಾಳೆ. ಬನ್ನಿ ಇಂದಿನ ಲೇಖನದಲ್ಲಿ ಉತ್ತರ ಕರ್ನಾಟಕ ಜನರ ಪಾಲಿನ ಆರಾಧ್ಯ ದೇವಿಯಾದ ಹುಲಿಗೆಮ್ಮ ದೇವಿಯ ಮಹಾತ್ಮೆ ತಿಳಿದು ಪುನೀತರಾಗೋಣ. ತುಂಗಭದ್ರಾ ನದಿಯ ದಂಡೆಯ ಮೇಲಿರುವ ಹುಲಿಗೆಮ್ಮ ದೇವಿಯ ಈ ದೇವಾಲಯವು 800 ವರ್ಷಗಳಷ್ಟು ಪುರಾತನವಾದುದು. ಈ ಊರನ್ನು ಹಿಂದಿನ ಕಾಲದಲ್ಲಿ ವ್ಯಾಗ್ರ ಪುರಿ ಎಂಬ ಹೆಸರಿನಿಂದ ಕರಯಲಾಗುತ್ತಿತ್ತು. ಈ ಕ್ಷೇತ್ರದಲ್ಲಿ ಹುಲಿಗೆಮ್ಮನ ಜೊತೆ ಮಾತಂಗಿ, ಪರಶುರಾಮ, ಸುಬ್ರಮಣ್ಯ, ಪಾರ್ವತಿ, ಗಣಪತಿ, ನವಗ್ರಹಗಳು ಹಾಗೂ ಸೋಮೇಶ್ವರ ದೇವರು ನೆಲೆನಿಂತು ಇಲ್ಲಿಗೆ ಬರುವ ಭಕ್ತರನ್ನು ಹರಿಸುತ್ತಿದ್ದಾರೆ. ಮಂಗಳವಾರ, ಶುಕ್ರವಾರ, ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನದಂದು ಇಲ್ಲಿಗೆ ಬಂದು ದೇವಿಗೆ ಪೂಜೆ ಮಾಡಿಸುವುದರಿಂದ ವ್ಯಾಪಾರ, ವ್ಯವಹಾರ ಸಮಸ್ಯೆ, ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಹಾಗೂ ಬದುಕಿನ ಅನೇಕ ಸಮಸ್ಯೆಗಳು ಪರಿಹಾರ ಆಗುತ್ತೆ ಎಂಬುದು ಈ ಕ್ಷೇತ್ರಕ್ಕೆ ಬರುವ ಭಕ್ತರ ಅಚಲವಾದ ನಂಬಿಕೆ ಆಗಿದೆ. ಈ ಕ್ಷೇತ್ರದಲ್ಲಿ ಹುಲಿಗೆಮ್ಮ ಬಂದು ನೆಲೆ ನಿಲ್ಲೋದರ ಹಿಂದೆ ಒಂದು ಕಥೆ ಇದೆ.
ಹಲವಾರು ವರ್ಷಗಳ ಹಿಂದೆ ಹುಲಿಗಿ ಎನ್ನುವ ಈ ಸ್ಥಳದಲ್ಲಿ ನಾಗಜೋಗಿ, ಹಾಗೂ ಬಸವಜೋಗಿ ಎನ್ನುವ ಸಹೋದರರು ಇದ್ರು. ಸವದತ್ತಿ ಯಲ್ಲಮ್ಮನ ಭಕ್ತರಾದ ಇವರು ಪ್ರತಿ ಹುಣ್ಣಿಮೆಯಂದು ಸವದತ್ತಿಗೆ ಹೋಗಿ ದೇವಿಯ ದರ್ಶನ ಮಾಡಿ ಬರ್ತಾ ಇದ್ರು. ಆದರೆ ಒಂದು ಬಾರಿ ಸವದತ್ತಿಗೆ ಹೋಗುವಾಗ ರಸ್ತೆಯ ಮಧ್ಯದಲ್ಲಿ ಜೋರಾಗಿ ಮಳೆ ಸುರಿಯಲು ಆರಂಬಿಸಿತು. ಹಾಗಾಗಿ ಸಹೋದರರು ಅದ ದಿನ ದೇವಿಯ ದರ್ಶನ ಮಾಡಲು ಆಗದೇ ದಾರಿಯ ಮಧ್ಯದಲ್ಲೇ ಯಲ್ಲಮ್ಮನ ದ್ಯಾನ ಮಾಡ್ತಾರೆ. ಆಗ ಅವರ ಭಕ್ತಿಗೆ ಮೆಚ್ಚಿ ಯಲ್ಲಮ್ಮ ಪ್ರತ್ಯಕ್ಷಳಾಗಿ ಇನ್ನು ಮುಂದೆ ನೀವು ನನ್ನ ದರ್ಶನಕ್ಕಾಗಿ ಸವದ ತ್ತಿಗೆ ಬರುವುದು ಬೇಡ. ನಾನೇ ನಿಮ್ಮ ಊರಿನಲ್ಲಿ ಹುಲಿಗೆಮ್ಮ ಎಂಬ ಹೆಸರಿನಿಂದ ನೆಲೆಸುತ್ತೇನೆ ಎಂದು ಅಭಯವನ್ನು ನೀಡುತ್ತಾಳೆ. ಈ ರೀತಿಯಾಗಿ ಇಲ್ಲಿ ರೇಣುಕಾ ದೇವಿಯೇ ಹುಲಿಗೆಮ್ಮ ಎನ್ನುವ ಹೆಸರಿನಿಂದ ದೇವಿ ನೆಲೆಸಿದಳು ಎಂದು ಹೇಳಲಾಗುತ್ತದೆ. ಇನ್ನೂ ಸಾಕ್ಷಾತ್ ಯಲ್ಲಮ್ಮನೇ ಹುಲಿಗೆಮ್ಮ ನಾಗಿ ನೆಲೆ ನಿಂತ ಈ ಕ್ಷೇತ್ರದಲ್ಲಿ ಪ್ರತಿವರ್ಷ ಅದ್ಧೂರಿಯಾಗಿ ಜಾತ್ರೆಯನ್ನು ಮಾಡಲಾಗುತ್ತೆ. ಈ ಜಾತ್ರೆಯ ವಿಶೇಷತೆ ಏನೆಂದರೆ,ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಹೊರಗಡೆ ಬಯಲಿನಲ್ಲಿ ದೊಡ್ಡ ಪಾತ್ರೆಯಲ್ಲಿ ಪಾಯಸವನ್ನು ಮಾಡಲಾಗುತ್ತೆ.
ಈ ಸಮಯದಲ್ಲಿ ಇಲ್ಲಿಗೆ ಬರುವ ಭಕ್ತಾದಿಗಳು ಕುಡಿಯುವ ಪಾಯಸದ ಪಾತ್ರೆಗೆ ಕೈ ಹಾಕಿ ದೇವಿಗೆ ಪಾಯಸವನ್ನು ಅರ್ಪಿಸುತ್ತಾರೆ. ಯಾರು ಈ ರೀತಿ ಮಾಡ್ತಾರೋ ಅವರಿಗೆ ದೇವಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಲಕ್ಷಾಂತರ ಮಂದಿ ಈ ಜಾತ್ರೆಯಲ್ಲಿ ಭಾಗಿಯಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಶಕ್ತಿಶಾಲಿಯಾದ ಹುಲಿಗೆಮ್ಮ ದೇವಿಯನ್ನು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ದರ್ಶನ ಮಾಡಬಹುದಾಗಿದ್ದು, ಪ್ರತಿ ಮಂಗಳವಾರ ಹಾಗೂ ಶುಕ್ರವಾರ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವಿಗೆ ಕುಂಕುಮಾರ್ಚನೆ, ದೀಪ ಸೇವೆ, ಆಭರಣ ಸೇವೆ, ಅಲಂಕಾರ ಸೇವೆ, ಹಣ್ಣು ಕಾಯಿಗಳ ಸೇವೆಗಳನ್ನು ಮಾಡಿಸಬಹುದಾಗಿದೆ. ಹುಲಿಗೆಮ್ಮ ನೆಲೆ ನಿಂತಿರುವ ಈ ಕ್ಷೇತ್ರವು ಕೊಪ್ಪಳ ಜಿಲ್ಲೆಯ ಹುಲಿಗಿ ಎಂಬ ಪುಟ್ಟ ಊರಿನಲ್ಲಿದೆ. ಈ ಕ್ಷೇತ್ರವು ರಾಜಧಾನಿ ಬೆಂಗಳೂರಿನಿಂದ 338 ಕಿಮೀ, ಗದಗದಿಂದಾ 86 ಕಿಮೀ, ಹುಬ್ಬಳ್ಳಿ ಇಂದ 144 ಕಿಮೀ, ಶಿವಮೊಗ್ಗದಿಂದ 205 ಕಿಮೀ, ಹೊಸಪೇಟೆ ಇಂದ 14 ಕಿಮೀ ದೂರದಲ್ಲಿದೆ. ಕೊಪ್ಪಳಕ್ಕೆ ಹಲವಾರು ಭಾಗಗಳಿಂದ ಕರ್ನಾಟಕ ಸಾರಿಗೆ ಬಸ್ಸುಗಳಿದ್ದು, ಕೊಪ್ಪಳದಿಂದ ಹುಲಿಗಿಗೆ ಬಸ್ ಅಥವ ಖಾಸಗಿ ವಾಹನದಲ್ಲಿ ತಲುಪಬಹುದಾಗಿದೆ. ಹೊಸಪೇಟೆಯು ಈ ದೇಗುಲಕ್ಕೆ ಸಮೀಪ ರೈಲ್ವೆ ನಿಲ್ದಾಣ ಆಗಿದೆ. ಸಾಧ್ಯವಾದರೆ ನೀವು ಒಮ್ಮೆ ಹುಲಿಗೆಮ್ಮ ದೇವಿಯ ದರ್ಶನ ಪಡೆದು ಅದ ದೇವಿಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗಿ. ಈ ಮಾಹಿತಿ ಇಷ್ಟವಾಗಿದ್ದಾರೆ. ತಪ್ಪದೇ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.