ನಮಸ್ತೆ ಪ್ರಿಯ ಓದುಗರೇ, ನಾವು ಯಾವುದೇ ಕಾರ್ಯಗಳನ್ನು ಪ್ರಾರಂಭ ಮಾಡುವ ಮೊದಲು ಸ್ತುತಿಸೋದು ವಿಘ್ನ ವಿನಾಶಕನನ್ನು, ಅವನ ಆಶೀರ್ವಾದ ಇಲ್ಲದೆ ಹೋದ್ರೆ ಯಾವ ಕೆಲಸವೂ ಪೂರ್ಣ ಆಗೋದಿಲ್ಲ. ಗಣಗಳಿಗೆಲ್ಲ ನಾಯಕನಾದ ಈ ದೇವನನ್ನು ಸ್ಮರಣೆ ಮಾಡಿದರೂ ಸಾಕು ನಮ್ಮನ್ನು ಅನುಗ್ರಹಿಸುತ್ತಾನೆ ಈ ದೇವಾನುದೇವ. ಬನ್ನಿ ಇವತ್ತಿನ ಸಂಚಿಕೆಯಲ್ಲಿ ಗಣಪತಿ ದೇವರು ನೆಲೆ ನಿಂತ ಗಣೇಶ್ ಪಾಲ್ ನ ಮಹಾಗಣಪತಿ ದೇವರನ್ನು ದರ್ಶನ ಮಾಡಿ ಪುನೀತರಾಗೋಣ. ಶಾಂತವಾಗಿ ಹರಿಯುವ ಶಾಲ್ಮಲೆ ಯ ನೀರು ಕಣ್ಣು ಹಾಯಿಸೋ ದೊರದಷ್ಟು ಕಾಣಿಸುವ ಕಲ್ಲು ಬಂಡೆಗಳು, ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳು, ಒತ್ತೊತ್ತಾಗಿ ಬೆಳೆದಿರುವ ಹಸಿರು ಮರಗಳು ಈ ಸುಂದರವಾದ ಪ್ರಕೃತಿಯ ಅದ್ಭುತದ ನಡುವೆ ಮಹಾಗಣಪತಿಯ ಸಾನಿಧ್ಯ ಇದ್ದು 300 ವರ್ಷಗಳ ಇತಿಹಾಸ ಹೊಂದಿ ರೊ ಈ ಕ್ಷೇತ್ರದಲ್ಲಿ ಗಣೇಶನ ಎರಡು ವಿಗ್ರಹಗಳನ್ನು ನಾವು ಕಾಣಬಹುದಾಗಿದೆ. ಇನ್ನೂ ನಾವು ಈ ಕ್ಷೇತ್ರದಲ್ಲಿ ನೆಲೆನಿಂತ ಗಣೇಶನಿಗೆ ಗನಹವನ ಸೇವೆ ಅಂದರೆ ಬಲು ಇಷ್ಟ. ಹೀಗಾಗಿ ವಿವಾಹ ವಿಳಂಬ ಸಮಸ್ಯೆ, ಆರ್ಥಿಕ ಸಮಸ್ಯೆ, ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರ ಸಮಸ್ಯೆ, ಕೌಟುಂಬಿಕ ಸಮಸ್ಯೆ, ವಿಧ್ಯಾಭ್ಯಾಸ ಸಮಸ್ಯೆ, ಹೀಗೆ ಬದುಕಿನಲ್ಲಿ ಯಾವ ಸಮಸ್ಯೆಗಳೂ ಇದ್ದರೂ ಈ ದೇವರ ಬಳಿ ಬಂದು ಗಣಹವನ ಸೇವೆ ಮಾಡಿಸಿಕೊಳ್ಳುತ್ತೇವೆ. ನಮ್ಮ ಸಂಕಷ್ಟಗಳನ್ನು ದೂರ ಮಾಡು ಅಂತ ಹರಕೆ ಹೊತ್ತರೆ ಸಾಕು. ನಮಗೆ ಬಂದ ಕಷ್ಟಗಳೆಲ್ಲವೂ ಆ ಮಹಾಗಣಪತಿಯ ಕೃಪೆಯಿಂದ ಮಾಯವಾಗುತ್ತವೆ. ಹಾಗಾಗಿ ಸಾಕಷ್ಟು ಮಂದಿ ಈ ದೇವಾಲಯಕ್ಕೆ ಬಂದು ಹರಕೆ ಹೊತ್ತು ಆ ಮಹಾಗಣಪತಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.

ಮಳೆಗಾಲದಲ್ಲಿ ಈ ದೇವಸ್ಥಾನವು ಸಂಪೂರ್ಣವಾಗಿ ನೀರಿನಿಂದ ಜಲಾವೃತವಾಗುತ್ತೆ. ಹೀಗಾಗಿ ಇಲ್ಲಿನ ದೇವರು ತನ್ನ ಭಕ್ತರಿಗೆ ಒಂದು ವರ್ಷದಲ್ಲಿ ಕೇವಲ 6 ತಿಂಗಳು ಮಾತ್ರ ದರ್ಶನ ನೀಡ್ತಾರೆ. ಈ ದೇಗುಲದ ವಿಶೇಷತೆ ಏನು ಅಂದ್ರೆ ಇಲ್ಲಿ ಮೂಲ ಗಣೇಶನ ವಿಗ್ರಹದ ಜೊತೆಗೆ ಸ್ವಯಂ ಭೂ ಗಣೇಶನನ್ನು ಅತ್ಯಂತ ಹತ್ತಿರ ನಿಂತು ನೋಡಬಹುದಾಗಿದೆ. ಗಣಪತಿಯ ಜೊತೆಗೆ ಈಶ್ವರ ಮತ್ತು ನಂದಿ ಕೂಡ ನೆಲೆಸಿದ್ದಾರೆ. ಮಹಾಗಣಪತಿಯು ಈ ನದಿಯ ತಟದಲ್ಲಿ ಬಂದು ನೆಲೆಸಿದ ಹಿಂದೆ ಒಂದು ಕಥೆ ಕೂಡ ಇದೆ. ಬಹಳ ವರ್ಷಗಳ ಹಿಂದೆ ಪುಟ್ಟಯ್ಯ ಹೆಗಡೆ ಎನ್ನುವವರು ದೈವೀ ಭಕ್ತರಾಗಿದ್ದು ಅವರು ಕಟ್ಟೆ ಎಂಬ ಪ್ರದೇಶದಲ್ಲಿದ್ದ ಗಣಪತಿಗೆ ನಿತ್ಯ ಪೂಜೆ ಮಾಡ್ತಾ ಇದ್ರು. ಒಂದು ದಿನ ಅವ್ರ ಕನಸಿನಲ್ಲಿ ಗಣೇಶ ಕಾಣಿಸಿಕೊಂಡು ನನ್ನನ್ನು ಶಾಲ್ಮಲಾ ನದಿಯ ಬಳಿ ತೆಗೆದುಕೊಂಡು ಹೋಗಿ ಸ್ಥಾಪನೆ ಮಾಡು ಎಂದು ಹೇಳಿದನಂತೆ. ಮೊದಲನೆಯ ದಿನ ಪುಟ್ಟಯ್ಯ ಅವ್ರು ನಂಬಲಿಲ್ಲವಂತೆ. ನಂತರ ಎರಡನೆಯ ದಿನವೂ ಕನಸಿನಲ್ಲಿ ಕಾಣಿಸಿಕೊಂಡಿದ್ದರ ಫಲವಾಗಿ ಗಣಪತಿಯನ್ನು ಇಲ್ಲಿ ಸ್ಥಾಪನೆ ಮಾಡಲಾಗಿದೆ ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಇನ್ನೂ ಈ ದೇವಸ್ಥಾನವು ನದಿಯ ಮಧ್ಯದಲ್ಲಿದ್ದರಿಂದ ಈ ಸ್ಥಳಕ್ಕೆ ಗಣೇಶ್ ಪಾಲ್ ಎನ್ನುವ ಹೆಸರು ಬಂತು ಎಂದು ಹೇಳಲಾಗುತ್ತದೆ.

ಪ್ರತಿ ವರ್ಷ ಮಾಘ ಶುದ್ಧ ಚೌತಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಈ ದಿನ ಸಾವಿರಾರು ಜನ ಗಣಪತಿಯ ದರ್ಶನ ಮಾಡಿ ಹೃತಾರ್ಥರಾಗುತ್ತರೆ. ನವೆಂಬರ್ ಇಂದ ಮೇ ತಿಂಗಳ ವರೆಗೆ ನಿತ್ಯ ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ದರ್ಶನ ಮಾಡಬಹುದಾಗಿದೆ. ಗಣಹವನ ಸೇವೆ ಮಾಡಿಸುವವರು ಮುಂಚಿತವಾಗಿ ಅರ್ಚಕರಿಗೆ ತಿಳಿಸಬೇಕಾಗುತ್ತದೆ. ಇಲ್ಲಿಗೆ ಬರುವ ಭಕ್ತರು ದೇವರಿಗೆ ಹಣ್ಣು ಕಾಯಿ ಸೇವೆ, ಸತ್ಯ ನಾರಾಯಣ ಪೂಜೆ, ಸತ್ಯ ಗಣಪತಿ ಪೂಜೆ, ಉಪನಿಷತ್ ಸೇವೆ, ತುಲಾಭಾರ ಸೇವೆಯನ್ನು ಮಾಡಿಸಬಹುದಾಗುದೆ. ಬೇಡಿದ ವರಗಳನ್ನು ಸಿದ್ಧಿಗೊಳಿಸುವ ಈ ಗಣೇಶನ ದೇವಾಲಯವು ಶಿರಸಿಯ ಸಮೀಪದ ಹಿತ್ಲಳ್ಳಿ ಎಂಬ ಪುಟ್ಟ ಗ್ರಾಮದಲ್ಲಿದೆ. ಈ ಕ್ಷೇತ್ರವು ಶಿರಸಿಯಿಂದ 30 ಕಿಮೀ, ಯಲ್ಲಾಪುರದ ದಿಂದ 34 ಕಿಮೀ, ಜಡ್ಡಿಗದ್ದೆ ಇಂದ 7 ಕಿಮೀ ದೂರದಲ್ಲಿದೆ. ಶಿರಸಿ ಇಂದ ಬೆಳಿಗ್ಗೆ 7 ಗಂಟೆಗೆ ಹಾಗೂ ಸಂಜೆ 5.30ಕ್ಕ ಗಂಟೆಗೆ ನೇರ ಸಾರಿಗೆ ಸೌಲಭ್ಯ ಇದೆ. ಬಾಡಿಗೆ ವಾಹನ ದಿಂದ ಈ ಕ್ಷೇತ್ರಕ್ಕೆ ಸುಲಭವಾಗಿ ತಲುಪಬಹುದು. ಶಿರಸಿ ಹಾಗೂ ಯಲ್ಲಾಪು ರಕ್ಕೆ ರಾಜ್ಯದ ಹಲವು ಭಾಗಗಳಿಂದ ಕರ್ನಾಟಕ ಸಾರಿಗೆ ವ್ಯವಸ್ಥೆ ಇದೆ. ತಾಳಕೊಪ್ಪವು ಈ ಕ್ಷೇತ್ರಕ್ಕೆ ಹತ್ತಿರ ಇರುವ ರೈಲ್ವೇ ನಿಲ್ದಾಣ ಆಗಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ. ಶುಭದಿನ.

Leave a Reply

Your email address will not be published. Required fields are marked *