WhatsApp Group Join Now

ನಮಸ್ತೆ ಪ್ರಿಯ ಓದುಗರೇ, ದಶ ಅವತಾರಗಳನ್ನು ಎತ್ತಿ ಲೋಕ ಕಂಟಕರಾದ ದುಷ್ಟ ಜನರನ್ನು ಸಂಹರಿಸಿ ಮಹಾವಿಷ್ಣುವು ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೂಪದಲ್ಲಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾನೆ. ತಿರುಪತಿ ಯಲ್ಲಿ ವೆಂಕಟೇಶ್ವರ ಆಗಿ ನೆಲೆಸಿದರೆ ಮೇಲುಕೋಟೆಯಲ್ಲಿ ಚೆಲುವ ನಾರಾಯಣ ಆಗಿ, ಶ್ರೀ ರಂಗಪಟ್ಟಣ ದಲ್ಲೀ ರಂಗನಾಥನ ರೂಪದಲ್ಲಿ ನೆಲೆಸಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಅದರಲ್ಲೂ ಈ ಕ್ಷೇತ್ರದಲ್ಲಿ ಭಕ್ತರ ಸಂಕಷ್ಟಗಳನ್ನು ದೂರ ಮಾಡೋಕೆ ಅಂತಾನೆ ಶ್ರೀ ಮನ್ ನಾರಾಯಣನು ಲಕ್ಷ್ಮೀಕಾಂತ ಸ್ವಾಮಿ ಯಾಗಿ ನೆಲೆ ನಿಂತಿದ್ದಾನಂತೆ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ಆ ಪುಣ್ಯ ಸ್ಥಳ ಯಾವುದು ಎಂದು ತಿಳಿದುಕೊಂಡು ಬರೋಣ. ಪುರಾಣಗಳಲ್ಲಿ ವೇಣು ಪುರಿ, ಕಪಿಲಾಷ್ರಮ, ತುಳಸಿ ಕಾನನ ಎಂದು ಉಲ್ಲೇಖಿಸಿರುವ ಕಳಲೆ ಗ್ರಾಮದಲ್ಲಿ ಲಕ್ಷ್ಮೀಕಾಂತ ಸ್ವಾಮಿ ಉದ್ಭವ ಮೂರ್ತಿಯಾಗಿ ನೆಲೆ ನಿಂತಿದ್ದು, ಈ ಸ್ಥಳದಲ್ಲಿ ದೇವನು ಬಲ ಗೈಯಲ್ಲೀ ಶಂಖ ಎಡ ಕೈಯಲ್ಲಿ ಚಕ್ರವನ್ನು ಹಿಡಿದು ನಾರಾಯಣನ ರೂಪದಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಈ ದೇಗುಲದಲ್ಲಿ ಇರುವ ಲಕ್ಷ್ಮೀಕಾಂತ ಸ್ವಾಮಿ ಮೂರ್ತಿಯು ಸುಮಾರು 3000 ವರ್ಷಗಳಷ್ಟು ಪುರಾತನವಾಗಿದೆ ಎಂದು ಹೇಳಲಾಗುತ್ತದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿತವಾದ ಈ ದೇಗುಲವು ಗೋಪುರ, ಮುಖ ಮಂಟಪ, ಗರ್ಬಗೃಹ, ನವರಂಗ, ಪಾಕಶಾಲೆ, ಹಾಗೂ ಯಾಗ ಶಾಲೆಯನ್ನು ಒಳಗೊಂಡಿದೆ. ಈ ಆಲಯವು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿತವಾಗಿದ್ದು, ದೇಗುಲದ ಗೋಡೆಗಳ ತುಂಬೆಲ್ಲಾ ಪುರಾಣದ ಕಥೆಗಳನ್ನು ದೇವ ದೇವತೆಯರ ಚಿತ್ರಣವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ.

ಇನ್ನೂ ಪುರಾಣಗಳ ಪ್ರಕಾರ ಒಂದು ಬಾರಿ ಜನಮೇಜಯ ರಾಜನು ಸಂಚಾರ ಮಾಡುತ್ತಾ ಈ ಸ್ಥಳಕ್ಕೆ ಬಂದಾಗ ಆತನಿಗೆ ಬಿದಿರಿನ ಮೇಳೆಯ ಬಳಿ ಹುಲಿ ಹಾಗೂ ಹಸುವು ಸಾಮರಸ್ಯದಿಂದ ಜೊತೆಗಿರುವ ದೃಶ್ಯ ಕಂಡಿತು. ಬದ್ಧ ವೈರಿಗಳಾದ ಪುಣ್ಯಕೋಟಿ ಮತ್ತು ಹುಲಿಯು ಒಟ್ಟಿಗೆ ಇರೋದನ್ನ ನೋಡಿ. ಇಲ್ಲಿ ಏನಾದರೂ ವಿಶೇಷ ಇರಬಹುದು ಎಂದು ಊಹಿಸಿ ಬಿದಿರಿನ ಮೇಳೆಯನ್ನು ಪರಿಶೀಲಿಸಿದಾಗ ಆತನಿಗೆ ಹುತ್ತದ ಒಳಗಿದ್ದ ಲಕ್ಷ್ಮೀಕಾಂತ ನ ಸ್ವಯಂಭೂ ವಿಗ್ರಹ ದೊರಕಿತು. ನಂತರ ಜಯಮೇಜಯನು ದೇವರ ಮೂರ್ತಿಯನ್ನು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪುಟ್ಟದಾದ ದೇಗುಲವನ್ನು ನಿರ್ಮಿಸಿದ ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ತಿಳಿಸಲಾಗಿದೆ. ಮುಂದೆ ಚೋಳರು, ಗಂಗರು, ವಿಜಯನಗರ ಅರಸರು, ಮೈಸೂರಿನ ಒಡೆಯರು, ದಳವಾಯಿಗಳು ಹೀಗೆ ಬೇರೆ ಬೇರೆ ರಾಜ ಮನೆತನದವರು ಈ ದೇವಸ್ಥಾನವನ್ನು ಹಂತ ಹಂತವಾಗಿ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ, ಈ ಕ್ಷೇತ್ರಕ್ಕೆ ಬಂದು ಲಕ್ಷ್ಮೀಕಾಂತ ಸ್ವಾಮಿಗೆ ತಮ್ಮ ಕೈಲಾದ ಸೇವೆಯನ್ನು ಮಾಡ್ತೀವಿ ಅಂತ ಹರಕೆ ಹೊತ್ತರೆ ಮನಸ್ಸಿನ ಕೊರಿಕೆಗಳೆಲ್ಲ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಎಷ್ಟೋ ಜನರು ಈ ದೇವನನ್ನು ನಂಬಿ ಬದುಕಿನಲ್ಲಿ ಒಳಿತನ್ನು ಕೂಡ ಕಂಡಿದ್ದಾರೆ. ಇನ್ನೂ ಈ ಕ್ಷೇತ್ರದಲ್ಲಿ ಲಕ್ಷ್ಮೀಕಾಂತ ದೇವಿಗೆ ಪ್ರತ್ಯೇಕ ಗುಡಿ ಇದ್ದು, ಅಮ್ಮನವರಿಗೆ ಅರವಿಂದ ನಾಯಕಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಈ ದೇವಿಗೆ ವಿಶೇಷ ಶಕ್ತಿ ಇರುತ್ತೆ ಎಂಬ ಪ್ರತೀತಿ ಇದೆ. ನವರಾತ್ರಿಯ ದಿನಗಳಲ್ಲಿ ವಿವಾಹ ವಿಳಂಬ ಸಮಸ್ಯೆ, ಸಂತಾನ ಸಮಸ್ಯೆ, ಆರ್ಥಿಕ ಸಮಸ್ಯೆ ಇರುವವರು ಇಲ್ಲಿಗೆ ಬಂದು ದೇವಿಗೆ ಭಕ್ತಿಯಿಂದ ಹಣ್ಣು ಕಾಯಿ ತಂದು ಪೂಜೆ ಮಾಡಿಸಿಕೊಂಡು ಹೋದ್ರೆ ಅವರ ಎಲ್ಲ ಸಮಸ್ಯೆಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

ನವರಾತ್ರಿಯಲ್ಲಿ ಹೇಗೆ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ ಯೋ ಅದೇ ರೀತಿ ಇಲ್ಲಿಯೂ ಕೂಡ ಪೂಜೆಯನ್ನು ಮಾಡಲಾಗುತ್ತದೆ. ಪ್ರತಿ ವರ್ಷವೂ ಮೀನ ಮಾಸದಲ್ಲಿ ಲಕ್ಷ್ಮೀಕಾಂತ ಸ್ವಾಮಿಯ ಬ್ರಹ್ಮ ರಥೋತ್ಸವ ವನ್ನಾ ಒಂಭತ್ತು ದಿನಗಳ ಕಾಲ ವಿಜೃಂಭಣೆ ಇಂದ ಆಚರಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ದೇವರ ಜಾತ್ರಾ ಮಹೋತ್ಸವ ವೂ ಸ್ವಾತಿ ನಕ್ಷತ್ರದಂದು ಜರುಗುತ್ತದೆ. ಇಲ್ಲಿ ನಡೆಯುವ ಜಾತ್ರೆಯಲ್ಲಿ ನವ ವಿವಾಹಿತ ಜೋಡಿಗಳು ಹಾಗೂ ಇತರ ಜನಗಳು ಬಂದು ದೇವರಿಗೆ ದವಸ ಧಾನ್ಯಗಳನ್ನು ಅರ್ಪಿಸಿ ತಮ್ಮ ಸಕಂಶ್ಟಗಳನ್ನು ದೂರ ಮಾಡುವಂತೆ ಸ್ವಾಮಿಯನ್ನು ಹರಸಿಕೊಳ್ಳುತ್ತಾರೆ. ಬ್ರಹ್ಮ ದೇವರು, ಕಪಿಲ ಮಹರ್ಷಿಗಳು ತಪಸ್ಸು ಮಾಡಿದ ಈ ಸ್ಥಳದಲ್ಲಿ ನೆಲೆಸಿರುವ ಲಕ್ಷ್ಮೀಕಾಂತ ನನ್ನು ನಂಬಿದರೆ ಬದುಕಿನಲ್ಲಿ ಇರುವ ಸಂಕಷ್ಟಗಳು ದೂರ ಆದಂತೆ. ಇಲ್ಲಿರುವ ಲಕ್ಷ್ಮೀಕಾಂತ ಸ್ವಾಮಿಗೆ ಪಾಂಚ ರಾಥ್ಯಗಮನ ರೀತಿಯಲ್ಲಿ ನಿತ್ಯ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ದೇವನನ್ನು ನಿತ್ಯ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಅಭಿಷೇಕ ಸೇವೆ, ತುಳಸಿ ಅರ್ಚನೆ, ಅಲಂಕಾರ ಸೇವೆ ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ಈ ಪುಣ್ಯ ಕ್ಷೇತ್ರವೂ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಳಕೆ ಎಂಬ ಪುಟ್ಟ ಗ್ರಾಮದಲ್ಲಿದೆ. ಈ ದೇಗುಲವು ಬೆಂಗಳೂರಿನಿಂದ 170 ಕಿಮೀ, ಮೈಸೂರಿನಿಂದ 30 ಕಿಮೀ, ನಂಜನಗೂಡು ಇಂದ ಕೇವಲ 7.7 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ಜೀವಮಾನದಲ್ಲಿ ಒಮ್ಮೆ ನೀವೂ ಕೂಡ ಕಳಲೆಯ ಲಕ್ಷ್ಮೀಕಾಂತ ಸ್ವಾಮಿಯನ್ನು ದರ್ಶನ ಮಾಡಿ ಪುನೀತರಾಗಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *