ಬೆಳಗಿನ ಸಮಯದಲ್ಲಿ ಪ್ರತಿ ದಿನ ಶುಂಠಿ ಚಹಾ ಕುಡಿಯುವುದರಿಂದ ನಿಮ್ಮ ದೇಹದ ತೂಕ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ. ಜೊತೆಗೆ ನಿಮ್ಮ ದೇಹದ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿರ್ವಹಣೆ ಮಾಡಿ ಸಮತೋಲನವನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ. ಶುಂಠಿ. ಈ ಹೆಸರಿನಲ್ಲೇ ನಾಲಿಗೆ ಚುರ್ರೆನಿಸುವ ಒಂದು ಗಮ್ಮತ್ತಿದೆ. ನೋಡಲು ಒರಟೊರಟಾಗಿ ಮೈಯಲ್ಲ ಮಣ್ಣು ಮೆತ್ತಿಕೊಂಡು ಜೊತೆಗೆ ತನಗೆ ಬೇಕಾದ ರೀತಿಯಲ್ಲಿ ಕವಲು ಹೊಡೆದುಕೊಂಡು ತನ್ನನ್ನು ಅಚ್ಚುಕಟ್ಟಾಗಿ ಶುಚಿ ಮಾಡಿಕೊಂಡೇ ಉಪಯೋಗಿಸ ಬೇಕೆಂದು ಆಜ್ಞೆ ಮಾಡಿ, ಇಷ್ಟ ಪಟ್ಟು ತಿನ್ನಲು ಹೋದರೆ ತನ್ನ ಅದ್ಬುತ ಘಾಟಿನ ಖಾರವನ್ನು ನೇರವಾಗಿ ನಾಲಿಗೆಯಿಂದ ಮೆದುಳಿಗೆ ಬಡಿಯುವಂತೆ ಮಾಡುವ ತರಕಾರಿ ಗಳ ಗುಂಪಿಗೆ ಸೇರಿದ ಒಂದು ಹೆಸರಾಂತ ಅಡುಗೆ ಸಾಮಗ್ರಿ.
ಹಿಂದಿನ ಕಾಲದಿಂದಲೂ ಭಾರತೀಯ ಅಡುಗೆಗಳಲ್ಲಿ ಅಷ್ಟೇ ಏಕೆ ಇಡೀ ವಿಶ್ವದ ತುಂಬೆಲ್ಲಾ ಅಡುಗೆಗಳಲ್ಲಿ ಒಗ್ಗರಣೆಯ ಜೊತೆಗೆ ತನ್ನ ಸ್ನೇಹಿತ ಬೆಳ್ಳುಳ್ಳಿಯ ಜೊತೆಗೆ ರುಚಿಯ ಸಾಮ್ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಭಾರತದ ಏಕೈಕ ತರಕಾರಿ ಈ ಶುಂಠಿ. ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಹಿರಿಯರು ಈಗಲೂ ಸಹ ತಲೆನೋವು ಬಂದರೆ ಶುಂಠಿ ಚಹಾ ಕೇಳುವುದು ರೂಢಿಯಲ್ಲಿದೆ.ಶುಂಠಿ ಚಹಾದಲ್ಲಿ ವಿಟಮಿನ್ ‘ ಸಿ ‘, ಪೊಟ್ಯಾಶಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣದ ಅಂಶ ಇದೆ. ಶುಂಠಿ ಚಹಾ ಕುಡಿಯುವುದರಿಂದ ಮನುಷ್ಯನ ದೇಹಕ್ಕೆ ಈ ಎಲ್ಲಾ ಅಂಶಗಳು ಸೇರಿ ಅನೇಕ ರೀತಿಯ ಆರೋಗ್ಯ ಪೂರಕವಾದ ಲಾಭಗಳು ಲಭಿಸುತ್ತವೆ. ಅವುಗಳು ಯಾವುವೆಂದು ವಿವರಣಾತ್ಮಕವಾಗಿ ಒಂದೊಂದಾಗಿ ನೋಡೋಣ.
ಶುಂಠಿ ಚಹಾ ದೇಹದ ತೂಕ ತಗ್ಗಿಸುವ ಪಾನೀಯ ಇತ್ತೀಚಿನ ದಿನಗಳಲ್ಲಿ ಮನುಷ್ಯನ ಬದಲಾದ ಜಡ ರೀತಿಯ ಜೀವನ ಶೈಲಿಯಿಂದ ಇನ್ನಿಲ್ಲದ ರೋಗಗಳನ್ನು ತನ್ನಲ್ಲಿ ಆಹ್ವಾನ ಮಾಡಿಕೊಳ್ಳುತ್ತಿದ್ದಾನೆ. ಇದರಲ್ಲಿ ದೇಹದ ಕೊಬ್ಬಿನಂಶ ಹೆಚ್ಚಾಗಿ ಬೇಡದ ಕಡೆಯೆಲ್ಲಾ ಬೊಜ್ಜು ಬೆಳೆದು ದೇಹದ ತೂಕ ಹೆಚ್ಚಾಗುತ್ತಿರುವುದು ಕೇವಲ ಒಂದು ಉದಾಹರಣೆಯಷ್ಟೇ. ಶುಂಠಿ ಚಹಾ ಇದಕ್ಕೊಂದು ಪರಿಹಾರ ಕೊಡುತ್ತದೆ.ಹೌದು. ಶುಂಠಿ ಚಹಾದಲ್ಲಿ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವ ಅದ್ಭುತ ಗುಣ ಲಕ್ಷಣಗಳಿವೆ. ಅಂದರೆ ಶುಂಠಿಯಲ್ಲಿ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳಾದ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಗಳು ಅಡಗಿವೆ. ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿ ಬಲಗೊಂಡಷ್ಟೂ ತನಗೆ ಎದುರಾಗುವ ಅನೇಕ ರೀತಿಯ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿ ಮನುಷ್ಯನಿಗೆ ಲಭ್ಯವಾಗುತ್ತದೆ. ಜೊತೆಗೆ ಯಾವುದೇ ರೀತಿಯ ಸೋಂಕುಗಳು ತಗುಲದಂತೆ ನೋಡಿಕೊಳ್ಳುತ್ತದೆ. ಇದಕ್ಕೆ ಕಾರಣ ಶುಂಠಿಯಲ್ಲಿರುವ ವಿಶೇಷ ರೀತಿಯ ಆಂಟಿ -ಆಕ್ಸಿಡೆಂಟ್ ಗಳು.