ವಾಸ್ತು ಶಾಸ್ತ್ರದಲ್ಲಿ ಹೇಳುವಂತೆ ಒಡೆದ, ಹಾಳಾದ ವಸ್ತುಗಳು ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿಗಳು ಕಾಣಿಸಿಕೊಳ್ಳುತ್ತವೆ. ಮನೆಯಲ್ಲಿ ವಾಸ್ತು ದೋಷವಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಮನೆಯಲ್ಲಿ ಆಗಾಗ ಕಲಹಗಳು ಉಂಟಾಗುವುದು, ಯಾರಿಗಾದರೂ ಅನಾರೋಗ್ಯ ಕಾಡುವುದು, ಹಣ ಕಳೆದುಕೊಳ್ಳುವುದು, ವ್ಯಾಪಾರದಲ್ಲಿ ನಷ್ಟ, ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಇಲ್ಲದಿರುವುದು, ಗಂಡ-ಹೆಂಡತಿ ನಡುವೆ ಸಾಮರಸ್ಯದ ಕೊರತೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳು ಆಗುತ್ತಲೇ ಇರುತ್ತವೆ. ಈ ಎಲ್ಲ ದೋಷಗಳಿಗೆ ನಿಮ್ಮ ಜಾತಕ, ಗ್ರಹಗತಿಗಳು ಮಾತ್ರ ಕಾರಣವಲ್ಲ, ಇದಕ್ಕೆ ನಿಮ್ಮ ಮನೆಯ ವಾಸ್ತುವೂ ಕಾರಣವಾಗಿರಬಹುದು. ಅಂದರೆ ನೀವೇ ಇಷ್ಟಪಟ್ಟು ಮನೆಯಲ್ಲಿ ತಂದಿಟ್ಟುಕೊಂಡ ವಸ್ತುಗಳೇ ನಿಮಗೆ ಮಾರಕವಾಗಿರುತ್ತದೆ. ಅದು ನಿಮ್ಮ ಗಮನಕ್ಕೆ ಬಂದಿರುವುದಿಲ್ಲ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ ವಾಸ್ತುಶಾಸ್ತ್ರದಲ್ಲಿ ಮನೆಯಲ್ಲಿರುವ ವಾಸ್ತು ದೋಷಗಳನ್ನು ನಿವಾರಿಸಲು ಅನೇಕ ಉಪಾಯಗಳು ಇವೆ. ಈ ಉಪಾಯಗಳನ್ನು ನೀವು ಅನುಸರಿಸಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತಡೆಹಿಡಿಯುವುದಲ್ಲದೆ ಸಕಾರಾತ್ಮಕವಾಗಿ ನಿಮಗೆ ಬಹಳ ಅನುಕೂಲ ಮಾಡಿಕೊಡುತ್ತದೆ. ಆ ಉಪಾಯಗಳು ಯಾವುವು ಎಂಬ ಬಗ್ಗೆ ತಿಳಿಯೋಣ ಬನ್ನಿ ಫ್ರೆಂಡ್ಸ್.
ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಿವಾರಣೆಗೆ ನೀರಿನ ಪ್ರಯೋಗ ಸಹ ಉಪಕಾರಿ ಆಗಲಿದೆ. ಇದಕ್ಕೆ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಸೂರ್ಯನ ಬೆಳಕಿಗೆ ಇಡಬೇಕು. ಹೀಗೆ ಮೂರರಿಂದ ನಾಲ್ಕು ತಾಸು ಇಟ್ಟು, ಬಳಿಕ ದೇವರ ಸ್ಮರಣೆ ಮಾಡಿ ಆ ನೀರನ್ನು ಮಾವಿನ ಅಥವಾ ಅಶೋಕ ಮರದ ಎಲೆಯಿಂದ ಪೂರ್ತಿ ಮನೆಗೆ ಸಿಂಪಡಣೆ ಮಾಡಬೇಕು. ಇಲ್ಲವೇ, ಬರೀ ನೀರನ್ನು ತೆಗೆದುಕೊಳ್ಳುವುದಕ್ಕಿಂತ ಗೋಮೂತ್ರ ಇಲ್ಲವೇ ಗಂಗಾಜಲವನ್ನು ಬಳಸಿದರೆ ಇನ್ನೂ ಉತ್ತಮ. ಮುಂಜಾನೆ ಮತ್ತು ಸಂಧ್ಯಾಕಾಲದಲ್ಲಿ ಧೂಪವನ್ನು ಮನೆಯೊಳಗೆ ಹಚ್ಚಿ ಅದರ ಘಮ ಎಲ್ಲೆಡೆ ಪಸರಿಸಬೇಕು. ಹೀಗೆ ಮಾಡುವುದರ ಜೊತೆ ಜೊತೆಗೆ ದೇವರ ನಾಮ ಸ್ತುತಿಗಳನ್ನು ಜಪಿಸುತ್ತಿರಬೇಕು. ಮನೆಯಲ್ಲಿ ಈ ಎರಡನ್ನೂ ಮಾಡಿದರೆ ಸಕಾರಾತ್ಮಕ ಶಕ್ತಿಗಳು ಹೆಚ್ಚುವುದಲ್ಲದೆ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರಾಗುತ್ತವೆ.
ಮನೆ ಎಂದ ಮೇಲೆ ಉಪ್ಪು ಇದ್ದೇ ಇರುತ್ತದೆ. ಆದರೆ, ಇದನ್ನು ನಾವು ಊಟಕ್ಕಷ್ಟೇ ಬಳಸುತ್ತೇವೆ. ಇದರಿಂದ ನಕಾರಾತ್ಮಕ ಶಕ್ತಿಯನ್ನೂ ಓಡಿಸಬಹುದು ಎಂಬುದು ನಿಮಗೆ ಗೊತ್ತಿದೆಯೆ? ಹಾಗಾದರೆ, ಉಪ್ಪಿನಿಂದ ಹೇಗೆ ನಕಾರಾತ್ಮಕ ಶಕ್ತಿಯನ್ನು ದೂರವಾಗಿಸಬಹುದು, ಸಕಾರಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ನೋಡೋಣ. ಮನೆಯನ್ನು ಗುಡಿಸಿದ ಮೇಲೆ ಒರೆಸುವುದು ರೂಢಿ. ಮನೆ ಒರೆಸಲು ಬಳಸುವ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಸ್ವಚ್ಛಗೊಳಿಸಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ. ಅಷ್ಟೇ ಅಲ್ಲದೆ, ಸಂಧ್ಯಾಕಾಲದಲ್ಲಿ ಮನೆಯ ಅಷ್ಟೂ ಮೂಲೆಯಲ್ಲಿ ಎರಡು ಕಾಳು ಉಪ್ಪನ್ನು ಇಟ್ಟು, ಮುಂಜಾನೆ ಅದನ್ನು ತೆಗೆದು ಹೊರಹಾಕಿದರೂ ಮನೆಗೆ ಒಳ್ಳೆಯದಾಗುತ್ತದೆ. ಮನೆಯಲ್ಲಿ ಕಿಟಕಿಗಳನ್ನು ಹೆಚ್ಚಿನವರು ತೆರೆಯುವುದೇ ಇಲ್ಲ. ಕಾರಣ, ಬೆಳಕು ಬಂದರೆ ಸಾಕೆಂದು ಸುಮ್ಮನಿರುತ್ತಾರೆ. ಆದರೆ, ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿಯೇ ಉಳಿದುಕೊಂಡಿರುತ್ತವೆ. ಹೀಗಾಗಿ ಮನೆಯ ಎಲ್ಲ ಕಿಟಕಿಗಳನ್ನು ಪ್ರತಿದಿನ 20 ನಿಮಿಷವಾದರೂ ತೆರದಿಟ್ಟರೆ ಶುಭವಾಗಲಿದೆ.