ಮನೆಯಲ್ಲಿ ಎಣ್ಣೆ ದೀಪ ಹಚ್ಚಿ ಬೆಳಗುವ ಮುಖ್ಯ ಉದ್ದೇಶ ಏನೆಂದರೆ, ಮನೆಗೆ ನಕಾರಾತ್ಮಕ ಶಕ್ತಿಗಳಿಂದ ಯಾವುದೇ ಕೆಟ್ಟ ಪ್ರಭಾವ ಬೀರದೇ ಇರಲಿ, ಮನೆಗೆ ಉಂಟಾಗಿರುವ ದೃಷ್ಟಿ ದೂರವಾಗಲಿ, ಇಡೀ ಮನೆಯ ತುಂಬಾ ಸಕಾರಾತ್ಮಕತೆ ಹರಿದಾಡಲಿ ಎನ್ನುವ ಕಾರಣಕ್ಕೆ. ಮನೆಯಲ್ಲಿ ದೇವರಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಹಚ್ಚುವ ಗಂಧದ ಕಡ್ಡಿಯ ಜೊತೆಗೆ ಕರ್ಪೂರದ ಆರತಿಯಿಂದ ಕೂಡ ಪೂಜೆ ಮಾಡುತ್ತೇವೆ. ಈ ಸಮಯಲ್ಲಿ ಗಂಧದ ಕಡ್ಡಿಯ ಜೊತೆಗೆ ಕರ್ಪೂರದ ಸುವಾಸನೆ ಕೂಡ ಇಡೀ ಮನೆಯ ತುಂಬಾ ಹರಡುತ್ತದೆ. ಇದರಿಂದ ಏನೋ ಒಂದು ರೀತಿ ಹೊಸ ಉಲ್ಲಾಸ ಮನಸ್ಸಿನಲ್ಲಿ ಮೂಡುತ್ತದೆ. ಮನಸ್ಸು ತುಂಬಾನೇ ಪ್ರಶಾಂತ ವಾಗುತ್ತದೆ. ಇಷೆಲ್ಲಾ ಮ್ಯಾಜಿಕ್ ಮಾಡುವ ಈ ಕರ್ಪೂರದಲ್ಲಿ, ಇನ್ನಷ್ಟು ಪ್ರಯೋಜನಗಳನ್ನು ಕೂಡ ನೋಡಬಹುದು, ಬನ್ನಿ ಅವು ಯಾವುದು ಎಂಬುದನ್ನು ಒಂದೊಂದಾಗಿ ನೋಡುತ್ತಾ ಹೋಗೋಣ.
ಪೂಜೆಯ ಸಂದರ್ಭದಲ್ಲಿ ದೇವರ ಎದುರಿಗೆ ಕರ್ಪೂರವನ್ನು ಹಚ್ಚಿಡುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಇದೇ ಕರ್ಪೂರವನ್ನು ಪ್ರತಿ ದಿನ ಸಂಜೆ, ಮನೆಯ ಪ್ರತಿಯೊಂದು ಕೋಣೆಯಲ್ಲೂ ಹಚ್ಚಿಡುವುದರಿಂದ, ಮನೆಯ ಕಿಟಕಿ, ಅಥವಾ ಕೋಣೆಯ ಬಾಗಿಲಿನ ಮೂಲೆಗಳಲ್ಲಿ ಅಡಗಿರುವ ಶಿಲೀಂಧ್ರವು ಅಥವಾ ಬ್ಯಾಕ್ಟೀರಿಯಾಗಳು ದೂರವಾಗಿ, ಕೋಣೆಯು ಸುವಾಸನೆಯಿಂದ ಕೂಡಿರುತ್ತದೆ. ಮನೆಯ ಕೋಣೆಯಲ್ಲಿ ಒಂದೊಂದು ಒಂದೆರಡು ಕರ್ಪೂರ ತುಂಡುಗಳನ್ನು ಇಟ್ಟು ಅದನ್ನು ಸುಡಬೇಕು. ಇದು ಸುಟ್ಟ ಬಳಿಕ ಹಾಗೆ ಕೋಣೆಗೆ ಬಾಗಿಲು ಹಾಕಿಬಿಡಿ. ಇದರಿಂದ ಮನೆಯ ಕೊಠಡಿ ತುಂಬಾ ಹೊಗೆ ತುಂಬಿ ಕೊಂಡು, ಸುವಾಸನೆಯಿಂದ ಕೂಡಿರುವುದು ಜೊತೆಗೆ ಸೊಳ್ಳೆ ಹಾಗೂ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಗಳು ದೂರವಾಗುವುದು.
ಮನೆಯಲ್ಲಿ ಕೆಲವೊಮ್ಮೆ ಎಲ್ಲೆಂದರಲ್ಲಿ ಇರುವೆಗಳು ಆಗಾಗ ಕಂಡುಬರುತ್ತವೆ. ಸಾಮಾನ್ಯವಾಗಿ ನಿರಪಾಯಕಾರಿಯಾದರೂ ಕೆಲವು ಪ್ರಬೇಧಗಳ ಇರುವೆಗಳು ಮಾತ್ರ ಕಚ್ಚಿದರೆ ತೀರಾ ಹೆಚ್ಚಿನ ನೋವು ತರಿಸುವಂತಹದ್ದಾಗಿರುತ್ತವೆ. ಹಾಗಾಂತ ಇವುಗಳನ್ನು ಓಡಿಸಲು ಅಪಾಯಕಾರಿ ರಾಸಾಯನಿಕಗಳನ್ನು ಬಳಸುವುದು ಕೂಡ ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದನ್ನು ಮರೆಯುವ ಹಾಗಿಲ್ಲ ವಿಶೇಷವಾಗಿ ಚಿಕ್ಕ ಮಕ್ಕಳು ಮನೆಯಲ್ಲಿದ್ದರೆ ಈ ರಾಸಾಯನಿಕಗಳು ಮತ್ತು ವಿಷಕಾರಿ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುವ ಅಪಾಯವಿರುತ್ತದೆ. ಅಲ್ಲದೇ ಇವು ವಾತಾವರಣವನ್ನೂ ಕಲುಶಿತಗೊಳಿಸುತ್ತವೆ. ಹಾಗಾಗಿ, ಇರುವೆಗಳನ್ನು ಓಡಿಸಲು ಕರ್ಪೂರವನ್ನು ಒಮ್ಮೆ ಟ್ರೈ ಮಾಡಿ ನೋಡಿ. ಎರಡು ಮೂರು ಬಿಲ್ಲೆ ಕರ್ಪೂರವನ್ನು ಚೆನ್ನಾಗಿ ನೀರಿನಲ್ಲಿ ಕರಗಿಸಿ, ಆಲೇಲೆ ಇರುವೆ ಸಾಲಿನ ಕಡೆ ಚಿಮುಕಿಸುವುದು ಮಾಡಬೇಕು. ಹೀಗೆ ಮಾಡುವುದರಿಂದ, ಬಂದ ದಾರಿಗೆ ಸುಂಕವಿಲ್ಲ ಎಂದು ಹೇಳಿ ಬಹಳ ಬೇಗನೆ ಇರುವೆಗಳು ಹೊರಟು ಹೋಗುತ್ತವೆ.