ಪನೀರ್ ಎಂದರೆ ಚೀಸ್. ಇದರಲ್ಲಿ ಕೊಬ್ಬಿನ ಅಂಶದ ಪ್ರಮಾಣ ಹೆಚ್ಚಾಗಿದೆ ಎಂದು ಸಾಕಷ್ಟು ಜನರು ಇದರಿಂದ ದೂರ ಉಳಿಯುತ್ತಾರೆ. ಅದರಲ್ಲೂ ಹೃದಯದ ತೊಂದರೆ ಇರುವವರು ಮತ್ತು ಅಧಿಕ ರಕ್ತದ ಒತ್ತಡ ಹೊಂದಿದ ಜನರು ಸಾಧಾರಣವಾಗಿ ಪನ್ನೀರಿನಿಂದ ದೂರವೇ ಉಳಿಯುತ್ತಾರೆ. ಆದರೆ ವೈದ್ಯರು ಬಿಪಿ ಇರುವವರು ಮತ್ತು ಹೃದಯದ ತೊಂದರೆ ಇರುವವರು ಮಿತ ಪ್ರಮಾಣದಲ್ಲಿ ತುಪ್ಪ ಕೂಡ ಸೇವನೆ ಮಾಡಬಹುದು ಎಂದು ಹೇಳುತ್ತಾರೆ. ಹಾಗಿದ್ದ ಮೇಲೆ ಕಡಿಮೆ ಕೊಬ್ಬಿನ ಅಂಶ ಹೊಂದಿರುವ ಪಾಲಕ್ ಪನೀರ್ ಸೇವನೆಯನ್ನು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಇದರಲ್ಲಿ ಅಪಾರ ಪ್ರಮಾಣದ ಮೆಗ್ನೀಷಿಯಂ, ಫೋಲೆಟ್, ಪೊಟ್ಯಾಶಿಯಂ, ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ವಿಟಮಿನ್ ಕೆ ಅಂಶ ಕಂಡುಬರುತ್ತದೆ. ಆರೋಗ್ಯ ತಜ್ಞರು ಹೇಳುವ ಹಾಗೆ ಪಾಲಕ್ ಪನೀರ್ ಸೇವನೆ ಮಾಡುವುದರಿಂದ ದೇಹಕ್ಕೆ ಅಗತ್ಯವಾಗಿ ಬೇಕಾದ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಅಂಶ ಸಿಗುತ್ತದೆ. ಇದು ಹೃದಯದ ಕಾರ್ಯಚಟುವಟಿಕೆ ಹೆಚ್ಚಿಸುತ್ತದೆ ಮತ್ತು ದೇಹದ ಮಾಂಸಖಂಡಗಳ ರಕ್ಷಣೆಯನ್ನು ಮಾಡುತ್ತದೆ. ಇನ್ನು ಕಾಟೇಜ್ ಚೀಸ್ ನಲ್ಲಿ ವಿಟಮಿನ್ ಬಿ2 ಮತ್ತು ವಿಟಮಿನ್ ಬಿ12 ಅಂಶಗಳು ಹೇರಳವಾಗಿ ಕಂಡು ಬಂದಿದ್ದು, ಆಹಾರವನ್ನು ಶಕ್ತಿಯುತವಾದ ಪ್ರಮಾಣಕ್ಕೆ ಬದಲಿಸುವುದರಲ್ಲಿ ಇದು ನೆರವಿಗೆ ಬರುತ್ತದೆ. ಸಾಕಷ್ಟು ಹೆಚ್ಚಿನ ಬಗೆಯ ಪೌಷ್ಟಿಕಾಂಶಗಳು ಇದರಲ್ಲಿದ್ದು, ಸಸ್ಯಾಹಾರಿಗಳಿಗೆ ಒಂದು ಅತ್ಯುತ್ತಮ ಆಹಾರವಾಗಿ ಇದು ಕೆಲಸ ಮಾಡಲಿದೆ ಎಂದು ತಿಳಿದುಬಂದಿದೆ. ತಮ್ಮ ಆಹಾರ ಪದ್ಧತಿಯಲ್ಲಿ ಪಾಲಕ್ ಪನ್ನೀರ್ ಸೇರಿಸಿಕೊಂಡು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.
ಹೇಗಾದರೂ ಮಾಡಿ ಸಣ್ಣ ಆಗಬೇಕು ಎಂದು ಈಗಾಗಲೇ ಡಯಟ್ ಬಗ್ಗೆ ಆಲೋಚನೆ ಮಾಡುತ್ತಿರುವವರು ತಮ್ಮ ಆಹಾರ ಪದ್ಧತಿಯಲ್ಲಿ ಪಾಲಕ್ ಪನೀರ್ ಸೇರಿಸಿಕೊಂಡರೆ ಉತ್ತಮ. ಏಕೆಂದರೆ ಇದು ವಿಶೇಷವಾಗಿ ಇಂತಹ ವ್ಯಕ್ತಿಗಳಿಗೆ ಸೂಕ್ತವಾಗುವ ಆಹಾರ ಪದಾರ್ಥ ಎಂದು ಹೇಳಬಹುದು. ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಇದರಲ್ಲಿದ್ದು, ಕೊಬ್ಬಿನ ಅಂಶ ಕೂಡ ಇದರಲ್ಲಿ ತುಂಬಾ ಕಡಿಮೆ ಇರುತ್ತದೆ. ನಾರಿನಂಶ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಕಾರಣ ಹೊಟ್ಟೆ ಹಸಿವಿನ ನಿಯಂತ್ರಣ ಮಾಡುವ ಅತ್ಯುತ್ತಮ ಆಹಾರ ಎಂಬ ಹೆಸರು ಪಡೆದಿದೆ. ನಿಮ್ಮ ದೇಹದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಆಹಾರದ ಹುಡುಕಾಟದಲ್ಲಿ ನೀವಿದ್ದರೆ, ಮತ್ತು ನಿಮ್ಮ ಸೊಂಟದ ಸುತ್ತಳತೆಯನ್ನು ನಿಯಂತ್ರಣ ಮಾಡುವ ಜೊತೆಗೆ ಬೊಜ್ಜಿನ ಅಂಶಕ್ಕೆ ಕಡಿವಾಣ ಹಾಕುವ ಆಹಾರದ ನಿರೀಕ್ಷೆ ನಿಮ್ಮದಾಗಿದ್ದರೆ ಪಾಲಕ್ ಪನೀರ್ ನಿಮಗಾಗಿ ಎಂಬುದನ್ನು ಮರೆಯಬೇಡಿ.