ಕೆಟ್ಟ ದೃಷ್ಟಿ ಕಣ್ಣು ಬೀಳುವುದು.ಎಂಬ ಪದವನ್ನು ನಾವು ಕೇಳಿರುತ್ತೇವೆ. ಇದಕ್ಕೆ ಹಲವಾರು ಕಾರಣಗಳು ಇರುತ್ತವೆ. ಯಾಕೆಂದರೆ ನೆಮ್ಮದಿಯ ಜೀವನದಲ್ಲಿ ಇದ್ದಕ್ಕಿದ್ದಂತೆ ಅಶಾಂತಿ ಸೃಷ್ಟಿಯಾಗಿಬಿಡುತ್ತದೆ. ಗೆಲುವಿನ ಹಾದಿಯಲ್ಲಿದ್ದಾಗ ಸೋಲಿನ ಭೀತಿ ಕಾಣುತ್ತಾ ಹೋಗುತ್ತದೆ ವ್ಯಾಪಾರದಲ್ಲಿ ಲಾಭವಾಗುತ್ತಿದ್ದ ಸಮಯದಲ್ಲಿ ನಷ್ಟ ಆಗುತ್ತಾ ಹೋಗುತ್ತದೆ, ಆರೋಗ್ಯವಾಗಿರುವ ಸಂದರ್ಭದಲ್ಲಿ ಅನಾರೋಗ್ಯವು ಕಾಡಲು ಪ್ರಾರಂಭಿಸುತ್ತದೆ. ಹೀಗೆ ಎಲ್ಲದಕ್ಕೂ ಏನು ಕಾರಣ ಎಂಬುದು ನಮಗೆ ಕೆಲವು ಸಮಯದಲ್ಲಿ ತಿಳಿಯದೇ ಹೋಗುತ್ತದೆ. ಗ್ರಹಗತಿಗಳು ಅಲ್ಪಮಟ್ಟಿಗೆ ಉತ್ತಮವಾಗಿದ್ದರೂ ಹೀಗೇಕೆ ಆಗುತ್ತದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಂತೆ ಕಾಡುತ್ತಿರುತ್ತದೆ. ಇದಕ್ಕೆ ಕಣ್ಣು ಬೀಳುವುದೂ ಒಂದು ಕಾರಣವಾಗಿರುವ ಸಾಧ್ಯತೆ ದಟ್ಟವಾಗಿರುತ್ತದೆ. ಕೆಲವರಿಗೆ ಇನ್ನೊಬ್ಬರ ಏಳ್ಗೆಯನ್ನು ಸಹಿಸಲು ಆಗದು. ಹೀಗಾಗಿ ಅವರ ಅಸೂಯೆಯಿಂದ ಇನ್ನೊಬ್ಬರ ಬೆಳವಣಿಗೆಯನ್ನು ನೋಡುತ್ತಿರುತ್ತಾರೆ. ಅದಕ್ಕೆ ಹೊಟ್ಟೆ ಉರಿಯನ್ನು ಪಟ್ಟುಕೊಳ್ಳುತ್ತಾರೆ. ಹೀಗಾಗಿ ಅವರ ಹೊಟ್ಟೆಕಿಚ್ಚಿನ ನೋಟದಿಂದ ಇತರರಿಗೆ ಕೆಟ್ಟದ್ದಾಗುತ್ತಾ ಹೋಗುತ್ತದೆ. ಹಾಗಾಗಿ ಗರ್ಭವತಿಯಾದವರಿಗೆ, ಪುಟ್ಟ ಮಕ್ಕಳಿಗೆ ಈ ಬಗ್ಗೆ ವಿಶೇಷ ನಿಗಾ ವಹಿಸಲಾಗುತ್ತದೆ. ಈ ದೃಷ್ಟಿದೋಷ ಹೇಗೆ, ಯಾರಿಗೆ ಆಗುತ್ತದೆ ಮತ್ತದಕ್ಕೆ ಪರಿಹಾರೋಪಾಯಗಳು ಏನು ಎಂಬ ಬಗ್ಗೆ ನೋಡೋಣ.
ಒಂದು ವರ್ಷದೊಳಗಿನ ಪುಟ್ಟ ಮಕ್ಕಳಿಗೆ ಬೇಗ ದೃಷ್ಟಿಯಾಗಲಿದೆ. ಹೀಗೆ ಅವರಿಗೆ ದೃಷ್ಟಿ ತಾಕಿದರೆ, ಹಾಲು ಕುಡಿಯುವುದಿಲ್ಲ. ಅಲ್ಲದೆ, ರಚ್ಚೆ ಹಿಡಿಯುವುದು, ರಾತ್ರಿ ಇಡೀ ನಿದ್ದೆ ಮಾಡದೇ ಇರುವುದು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ತುತ್ತಾಗುತ್ತವೆ. ಈ ರೀತಿ ಆದಾಗ ಸಾಸಿವೆ, ಉಪ್ಪು ತೆಗೆದುಕೊಂಡು ಆ ಮಗುವಿಗೆ ನಿವಾಳಿಸಿ ಹಾಕಬೇಕು. ಪೂಜಿಸಿದ ಇಲ್ಲವೇ ಮಂತ್ರಿಸಿದ ತಾಯತ ಅಥವಾ ಯಂತ್ರವನ್ನು ಕಪ್ಪುದಾರದಲ್ಲಿ ಕಟ್ಟಿ, ಕುತ್ತಿಗೆಗೆ ಅಥವಾ ಕೈಗೆ ಕಟ್ಟಬೇಕು. ಇದು ಬಹುಬೇಗ ನೋಡುಗರ ದೃಷ್ಟಿಗೆ ಬೀಳುವುದರಿಂದ ಕಟ್ಟಿಸಿಕೊಂಡ ಮಗುವಿಗೆ ದೃಷ್ಟಿ ತಾಕದು. ವ್ಯಾಪಾರ – ವ್ಯವಹಾರದಲ್ಲಿ ಒಳ್ಳೇ ಲಾಭ ಪಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ನಷ್ಟದ ಸುಳಿಗೆ ಸಿಲುಕುತ್ತದೆ. ಇಲ್ಲವೇ ಮಂದಗತಿಯಲ್ಲಿ ಸಾಗುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಲಾಭ ಕಾಣಲು ಸಾಧ್ಯವಾಗುವುದಿಲ್ಲ. ಇಂಥ ಸಂಕಷ್ಟಕ್ಕೆ ದೃಷ್ಟಿದೋಷ ಸಹ ಕಾರಣ ಆಗಿರಬಹುದಾಗಿರುತ್ತದೆ. ಇದಕ್ಕೆ ಪರಿಹಾರವಾಗಿ ವ್ಯಾಪಾರದ ಸ್ಥಳದಲ್ಲಿ ನಿಂಬೆ ಹಣ್ಣು ಹಾಗೂ ಮೆಣಸಿಕಾಯಿಯನ್ನು ಕಟ್ಟಬೇಕು. ಇದು ನಿಮ್ಮ ಕಾರ್ಯಕ್ಷೇತ್ರಕ್ಕೆ ಬರುವ ಎಲ್ಲರಿಗೂ ಕಾಣುವಂತೆ ಇರಬೇಕು.
ಆರೋಗ್ಯ ಉತ್ತಮವಾಗಿಯೇ ಇರುತ್ತದೆ. ಹೊತ್ತಿಂದ ಹೊತ್ತಿಗೆ ಊಟ ತಿಂಡಿ ಎಲ್ಲವೂ ಸೇರುತ್ತಿರುತ್ತದೆ. ಆದರೆ, ಒಮ್ಮೆಲೆಗೆ ಏನಾಯಿತೋ ಏನೋ.ಯಾವುದೂ ಸಹ ತಿನ್ನಲು ಬೇಡವಾಗಿಬಿಡುತ್ತದೆ. ತಿನ್ನಲು ಹೋದರೂ ಹಸಿವು ಆಗುತ್ತಿರುವುದಿಲ್ಲ. ಇದರಿಂದ ಅನಾರೋಗ್ಯ ಉಂಟಾಗುತ್ತದೆ. ಇದು ಮಕ್ಕಳಿಗಾದರೂ ಸರಿ, ಹಿರಿಯರಿಗಾದರೂ ಸರಿ. ಕೆಟ್ಟ ದೃಷ್ಟಿ ಬಿದ್ದಾಗ ಹೀಗೆ ಆಗುವ ಸಂಭವ ಹೆಚ್ಚಿರುತ್ತದೆ. ಈ ರೀತಿ ಆಗುತ್ತಿದ್ದರೆ, ಒಂದು ಲೋಟದಲ್ಲಿ ನೀರು ತೆಗೆದುಕೊಂಡು ಏಳು ಬಾರಿ ತಲೆಯ ಮೇಲಿಂದ ನಿವಾಳಿಸಬೇಕು. ಅದನ್ನು ನಾಲ್ಕು ರಸ್ತೆ ಸೇರುವಲ್ಲಿ ಚೆಲ್ಲಿ ತಿರುಗಿ ನೋಡದೇ ವಾಪಸ್ ಬರಬೇಕು.