ಅದೃಷ್ಟವನ್ನು ನಂಬಿಕೊಂಡವರು ಯಾವಾಗಲೂ ನಕ್ಷತ್ರಗಳು, ಗ್ರಹಗಳು, ಸ್ಥಳಗಳು, ಅದೃಷ್ಟದ ಚಪ್ಪಲ್ಲಿ, ಅದೃಷ್ಟದ ಸೋಪ್ಗಳು, ಅದೃಷ್ಟದ ಸಂಖ್ಯೆಗಳು ಇನ್ನೂ ಅನೇಕ ರೀತಿಯ ವಸ್ತುಗಳಿಗೆ ಇಳಿಬಿದ್ದಿರುತ್ತಾರೆ. ಅದೃಷ್ಟದ ಹುಡುಕಾಟದಲ್ಲಿ ಮತ್ತು ಅದಕ್ಕಾಗಿ ಕಾಯುವ ಪ್ರಕ್ರಿಯೆಯಲ್ಲಿ, ಅವರು ತಾವಾಗಿಯೇ ಸುಲಭವಾಗಿ ಸೃಷ್ಟಿಸಬಹುದಾದ ವಿಷಯಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಜೀವನದ ಎಲ್ಲಾ ವಿಷಯಗಳನ್ನು ನಿರ್ಮಿಸಿಕೊಳ್ಳಬೇಕಾದವರು ನೀವೇ. ನಿಮ್ಮ ಶಾಂತಿ ಮತ್ತು ನಿಮ್ಮ ಗೊಂದಲಗಳು, ನಿಮ್ಮ ವಿವೇಕ ಮತ್ತು ಹುಚ್ಚುತನ, ನಿಮ್ಮ ಸಂತೋಷ ಮತ್ತು ದುಃಖಗಳೆಲ್ಲವೂ ನಿಮ್ಮದೇ ಜವಾಬ್ದಾರಿಯಾಗಿದೆ. ನಿಮ್ಮೊಳಗಿನ ದೆವ್ವವೂ ದೈವವೂ ನಿಮ್ಮದೇ ಜವಾಬ್ದಾರಿ.
ಆಕಸ್ಮಿಕವಾಗಿ ಕೆಲವು ಒಳ್ಳೆಯ ವಿಷಯಗಳು ಘಟಿಸಬಹುದು. ಆದರೆ ನೀವು ಆ ಅವಕಾಶಕ್ಕಾಗಿ ಕಾಯುತ್ತಾ ಕುಳಿತರೆ, ಆ ಒಳ್ಳೆಯ ವಿಷಯಗಳು ನೀವು ನಿಮ್ಮ ಗೋರಿಯಲ್ಲಿರುವಾಗ ಮಾತ್ರ ಸಂಭವಿಸಬಹುದು, ಏಕೆಂದರೆ ಅವು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುತ್ತವೆ. ನಿಮ್ಮ ಶಕ್ತಿಗಳಿಗೆ ಅವುಗಳ ಸಂಪೂರ್ಣ ಸಾಮರ್ಥ್ಯಕ್ಕೆ ವ್ಯಕ್ತವಾಗುವ ಅವಕಾಶವನ್ನು ಮಾಡಿಕೊಡುವ ಬದಲು, ನಿಮ್ಮ ಸುತ್ತಲು ಅಗತ್ಯವಾದ ಆಂತರ್ಯ ಹಾಗೂ ಬಾಹ್ಯ ವಾತಾವರಣವನ್ನು ಸೃಷ್ಟಿಸುವ ಮೂಲಕ ಸರಿಯಾದ ಸನ್ನಿವೇಶಗಳು ಸೃಷ್ಟಿಯಾಗುವಂತೆ ಮಾಡುವ ಬದಲು, ದುರದೃಷ್ಟವಶಾತ್, ಅದನ್ನು ನಮಗೆ ಒದಗಿಸಬಹುದಾದ ಬೇರೆ ಇನ್ನೇನಕ್ಕಾಗೋ ನಾವು ಯಾವಾಗಲೂ ಹುಡುಕುತ್ತಿರುತ್ತೇವೆ.
ಇಂದಿನ ದಿನವನ್ನು, ಬೆಳಗ್ಗೆಯಿಂದ ಸಂಜೆಯವರೆಗೆ ನೀವು ಹೇಗೆ ಅನುಭವಿಸಿದಿರಿ ಎನ್ನುವುದು ಖಂಡಿತವಾಗಿಯೂ ನಿಮ್ಮ ಕೈಯಲ್ಲೇ ಇದೆ. ನಿಮ್ಮ ಸುತ್ತಲಿನ ಜನರೊಂದಿಗೆ ನೀವೆಷ್ಟು ಘರ್ಷಣೆಯನ್ನು ಮಾಡಿಕೊಂಡಿರಿ ಎನ್ನುವುದು, ಕೇವಲ ಆ ಸನ್ನಿವೇಶಗಳು ಹಾಗೂ ಜನರನ್ನು, ಅವರೊಳಗಿನ ಮಿತಿ ಮತ್ತು ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನೀವೆಷ್ಟು ವಿವೇಚನಾರಹಿತವಾಗಿರುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿದೆ. ನೀವು ಧರಿಸಿರಬಹುದಾದಂತಹ ಯಾವುದೇ ಅದೃಷ್ಟದ ಯಂತ್ರಗಳಿಂದ ಖಂಡಿತವಾಗಿಯೂ ಅದು ನಿರ್ಧಾರವಾಗುವುದಿಲ್ಲ. ನೀವೆಷ್ಟು ವಿವೇಚನೆಯಿಂದ, ಬುದ್ಧಿವಂತಿಕೆಯಿಂದ, ಮತ್ತು ನಿಮ್ಮ ಸುತ್ತಲಿನ ಜೀವನವನ್ನು ಎಷ್ಟು ಕಾಳಜಿಯಿಂದ ನೋಡುತ್ತೀರಿ ಎಂಬುದರ ಮೇಲೆ ಮಾತ್ರ ಅದು ಅವಲಂಬಿಸಿರುತ್ತದೆ.