ಇಂದು ಪ್ರತಿಯೊಂದು ಅಡುಗೆ ಮನೆಯಲ್ಲೂ ಜಾಗ ಪಡೆದಿರುವಂತಹ ರೆಫ್ರಿಜರೇಟರ್ ಎನ್ನುವುದು ಐಷಾರಾಮಿ ವಸ್ತುವಾಗಿ ಉಳಿದಿಲ್ಲ. ಸಾಮಾನ್ಯ ಜನರು ಕೂಡ ಇದರ ಬಳಕೆ ಮಾಡುತ್ತಿದ್ದಾರೆ. ಆದರೆ ಇದರ ಸರಿಯಾದ ಬಳಕೆ ತಿಳಿಯದೆ ಕೆಲವು ಜನರು ಪ್ರತಿಯೊಂದು ಆಹಾರವನ್ನು ಫ್ರಿಡ್ಜ್ ನಲ್ಲಿ ಇಡುವರು. ಇದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಸಾಮಾನ್ಯವಾಗಿ ನಾವು ಫ್ರಿಡ್ಜ್ ನಲ್ಲಿ ಯಾವುದೇ ಆಹಾರವನ್ನು ಇಟ್ಟರೂ ಅದು ದೇಹಕ್ಕೆ ಒಳ್ಳೆಯದಲ್ಲ. ಕೆಡುವಂತಹ ಆಹಾರವನ್ನು ಫ್ರಿಡ್ಜ್ ನಲ್ಲಿ ಇಟ್ಟು ಬಳಕೆ ಮಾಡುವಂತಹ ವಿದೇಶ ಸಂಸ್ಕೃತಿಯನ್ನು ನಾವಿಂದು ಬೆಳೆಸಿಕೊಂಡಿದ್ದೇವೆ. ತಾಜಾ ಹಣ್ಣುಗಳು, ತರಕಾರಿಗಳ ಬಳಕೆ ಕಡಿಮೆ ಆಗುತ್ತಿದೆ. ದೇಹಕ್ಕೆ ಬೇಕಾದಷ್ಟು ಸಿಗಬೇಕಾದ ಪೋಷಕಾಂಶಗಳು ಇದರಿಂದ ಸಿಗದು. ಈ ಲೇಖನವು ಫ್ರಿಡ್ಜ್ ನ್ನು ಅತಿಯಾಗಿ ಬಳಕೆ ಮಾಡುವವರಿಗಾಗಿ ಮತ್ತು ಯಾವ ಆಹಾರವನ್ನು ಫ್ರಿಡ್ಜ್ ನಲ್ಲಿ ಇಡಬಾರದು ಎಂದು ತಿಳಿಯಲು.
ಕಲ್ಲಂಗಡಿಯನ್ನು ಫ್ರಿಡ್ಜ್ ನಲ್ಲಿ ಇಡಲೇಬಾರದು. ಇದನ್ನು ನೀವು ಹಾಗೆ ಕೋಣೆಯ ತಾಪಮಾನದಲ್ಲಿ ಇಡಬೇಕು ಮತ್ತು ಇದರಿಂದ ರುಚಿಯು ಹಾಗೆ ಉಳಿಯುವುದು. ಕೆಲವೊಂದು ಆಹಾರಗಳನ್ನು ಕೋಣೆಯ ತಾಪಮಾನದಲ್ಲಿ ಇಟ್ಟಾಗ ಅದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಉಂಟಾಗುವುದು ಎಂದು ಯುಎಸ್ ಡಿಎ ಅಧ್ಯಯನವು ತಿಳಿಸಿದೆ. ಫ್ರಿಡ್ಜ್ ನಲ್ಲಿ ನೀವು ಇಡಬಾರದ ಆಹಾರಗಳಲ್ಲಿ ಬ್ರೆಡ್ ಕೂಡ ಒಂದಾಗಿದೆ. ಬ್ರೆಡ್ ನ್ನು ನೀವು ಫ್ರಿಡ್ಜ್ ನಲ್ಲಿಇಟ್ಟರೆ ಅದು ಬೇಗನೆ ಕೆಡುವುದು ಮತ್ತು ಒಣಗುವುದು ಕೂಡ. ಒಣ ಹಾಗೂ ತಂಪಾಗಿರುವ ಜಾಗದಲ್ಲಿ ಬ್ರೆಡ್ ನ್ನು ಇಡಬೇಕು. ಕೆಲವರು ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿ ಶೇಖರಿಸಿಡುವಂತಹ ಅಭ್ಯಾಸ ಬೆಳೆಸಿಕೊಂಡಿರುವರು. ಆದರೆ ಈರುಳ್ಳಿಯನ್ನು ಯಾವಾಗಲೂ ಒಣ ಹಾಗೂ ಕತ್ತಲಿನಲ್ಲಿ ಇಡಬೇಕು. ಅವುಗಳಿಗೆ ಮೊಳಕೆ ಬರದೆ, ಗಾಳಿಯಾಡದಂತೆ ಇಡಬೇಕು. ಅರ್ಧ ಈರುಳ್ಳಿಯನ್ನು ನೀವು ಫ್ರಿಡ್ಜ್ ನಲ್ಲಿ ಇಟ್ಟರೂ ಆಗ ನೀವು ಅದಕ್ಕೊಂದು ಫಾಯಿಲ್ ಪೇಪರ್ ಸುತ್ತಿಕೊಂಡು ಇಟ್ಟುಬಿಡಿ.
ನೀವು ಯಾವುದೇ ತಾಜಾ ಗಿಡಮೂಲಿಕೆಗಳನ್ನು ಫ್ರಿಡ್ಜ್ ನಲ್ಲಿ ಇಡುತ್ತಲಿದ್ದರೆ ಆಗ ನೀವು ಇದನ್ನು ನಿಲ್ಲಿಸಬೇಕು. ಫ್ರಿಡ್ಜ್ ನಲ್ಲಿ ಇಟ್ಟಾಗ ಗಿಡಮೂಲಿಕೆಗಳು ಬೇಗನೆ ಒಣಗಿ ಹೋಗುವುದು ಎಂದು ತಿಳಿಯಿರಿ. ರೋಸ್ಮೇರಿ, ಥೈಮೆ ಮತ್ತು ಒರೆಗಾನೊವನ್ನು ನೀವು ಪೇಪರ್ ಟವೆಲ್ ನಲ್ಲಿ ಸುತ್ತಿಕೊಂಡು ಫ್ರಿಡ್ಜ್ ನಲ್ಲಿ ಇಡಬಹುದು.ನೈಸರ್ಗಿಕವಾಗಿ ಸಿಗುವಂತಹ ಜೇನುತುಪ್ಪವನ್ನು ನೀವು ಅನೈಸರ್ಗಿಕವಾದ ಫ್ರಿಡ್ಜ್ ನಲ್ಲಿ ಇಟ್ಟರೆ ಆಗ ಅದರ ರುಚಿ ಕೆಡುವುದು. ಇದರ ನಿಜವಾದ ರುಚಿ ಹಾಗೂ ಸುವಾಸನೆ ಪಡೆಯಬೇಕಾದರೆ ನೀವು ಜೇನುತುಪ್ಪವನ್ನು ಫ್ರಿಡ್ಜ್ ನಲ್ಲಿ ಇಡಬಾರದು.ಆಲೂಗಡ್ಡೆಯನ್ನು ಯಾವಾಗಲೂ ನೀವು ಕೋಣೆಯ ತಾಪಮಾನದಲ್ಲಿ ಇಟ್ಟರೆ ಅದರಿಂದ ಸಿಗುವ ಪೋಷಕಾಂಶಗಳು ನಿಮಗೆ ಲಭ್ಯವಾಗುವುದು. ಫ್ರಿಡ್ಜ್ ನಲ್ಲಿ ಇಟ್ಟರೆ ಆಗ ತಂಪಾದ ತಾಪಮಾನಕ್ಕೆ ಬಟಾಟೆಯಲ್ಲಿನ ಪಿಷ್ಠವು ಸಕ್ಕರೆಯಾಗಿ ಪರಿವರ್ತನೆ ಆಗುವುದು. ಇದು ಮಧುಮೇಹಿಗಳಿಗೆ ಹಾನಿಕರ.