ಕೂದಲು ಆರೋಗ್ಯಕರವಾಗಿ ಬೆಳೆಯಲು ನೀವು ಯಾವುದೋ ಒಂದು ವಿಧಾನ ಅನುಸರಿಸಿದರೆ ಸಾಕಾಗುವುದಿಲ್ಲ, ನಾವು ಸೇವಿಸುವ ಆಹಾರದಿಂದ ಹಿಡಿದು ಬಳಸುವ ಬಾಚಣಿಗೆಯೂ ಇದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಬಹಳ ವೇಗವಾಗಿ ದಟ್ಟವಾಗಿ, ಉದ್ದವಾಗಿರುವ ರಾಪುಂಜೆಲ್ ತರಹ ಕೂದಲು ಪಡೆಯಲು ಯಾರಿಗೆ ತಾನೇ ಇಷ್ಟವಿಲ್ಲ, ಒಂದು ವೇಳೆ ನಿಮಗೂ ರಾಪುಂಜೆಲ್ ತರಹ ಕೂದಲನ್ನು ಬೆಳೆಸಬೇಕೆಂದು ಬಯಸಿದರೆ ಅಥವಾ ಕೂದಲಿನ ಗುಣಮಟ್ಟವನ್ನು ಸುಧಾರಿಸಲು ಬಯಸಿದರೆ ಕೆಲವು ವಿಷಯಗಳತ್ತ ಗಮನಕೊಡಬೇಕಾಗುತ್ತದೆ. ಮೊದಲಿಗೆ ಕೂದಲಿನ ಬೆಳವಣಿಗೆಯನ್ನು ಹೇಗೆ ವೇಗಗೊಳಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಕೂದಲು ದಿನಕ್ಕೆ 0.44 ಮಿಮೀ ಅಥವಾ ವರ್ಷಕ್ಕೆ ಆರು ಇಂಚುಗಳಷ್ಟು ಬೆಳೆಯುತ್ತದೆ.
ನಿಮ್ಮ ಕೂದಲು ಮೂಲದಿಂದ ವೇಗವಾಗಿ ಬೆಳೆಯುವಂತೆ ಮಾಡಲು ಪ್ರಾಯೋಗಿಕವಾಗಿ ಸಾಬೀತಾಗಿರುವ ಯಾವುದೇ ಪದಾರ್ಥಗಳು ಅಥವಾ ವಿಧಾನಗಳು ಇಲ್ಲ. ಬದಲಾಗಿ, ಕೂದಲು ಒಡೆಯುವಿಕೆಯನ್ನು ಕಡಿಮೆ ಮಾಡುವುದು ಮತ್ತು ಕೂದಲಿನ ಗುಣಮಟ್ಟವನ್ನು ಸುಧಾರಿಸುವುದರಿಂದ ಪ್ರತಿಯಾಗಿ ಕೂದಲು ಉದ್ದವಾಗುವುದನ್ನು ಉತ್ತೇಜಿಸುತ್ತದೆ. ಹಾಗಾದರೆ ಕೂದಲು ಉತ್ತಮವಾಗಿ ಬೆಳೆಯಲು ಏನು ಮಾಡಬೇಕೆಂಬುದನ್ನು ನೋಡೋಣ. ನಿಮ್ಮ ಆಹಾರಕ್ರಮ ಸರಿಯಾಗಿ ಇರದಿದ್ದರೆ ಕೂದಲು ಉತ್ತಮವಾಗಿ ಬೆಳೆಯುವುದಿಲ್ಲ. ಸಾಕಷ್ಟು ಪ್ರೋಟೀನ್ ಸೇವನೆಯೊಂದಿಗೆ ಸಮತೋಲಿತ ಆಹಾರವನ್ನು ಸೇವಿಸುವುದು ಕೂದಲಿನ ಬೆಳವಣಿಗೆಗೆ ಸೂಕ್ತವಾಗಿದೆ. ಬಯೋಟಿನ್, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ, ಸತು, ಕಬ್ಬಿಣ, ಒಮೆಗಾ -3 ಮತ್ತು ಒಮೆಗಾ -6 ನಿಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ”ಎಂದು ತಜ್ಞರು ಹೇಳುತ್ತಾರೆ . ನೈಸರ್ಗಿಕವಾಗಿ ಕೂದಲು ಬೆಳೆಯಲು ಒಂದು ಉತ್ತಮ ಪರಿಹಾರವೆಂದರೆ ಪೋಷಕಾಂಶಗಳಿಂದ ಕೂಡಿದ, ಶುಚಿಯಾದ ಊಟ ಮಾಡುವುದು.
ನೆತ್ತಿಗೆ ಮಸಾಜ್ ಮಾಡುವುದರಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ನಿದ್ರೆ ಮಾಡುವ ಮೊದಲು ಅಥವಾ ದಿನಕ್ಕೆ ಒಂದು ಬಾರಿ ಬೆಚ್ಚಗಿನ ಎಣ್ಣೆಯಿಂದ ನೆತ್ತಿಗೆ ಮಸಾಜ್ ಮಾಡುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಮಸಾಜ್ ಮಾಡುವುದರಿಂದ ಇದು ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಕೂದಲು ಕಿರುಚೀಲಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ, ನೆತ್ತಿಯ ಮಸಾಜ್ ಮಾಡಿದ ನಂತರ ಮರದ ಬಾಚಣಿಗೆಯನ್ನು ಬಳಸುವುದು ಒಳ್ಳೆಯದು. ಏಕೆಂದರೆ ಇದು ಕೂದಲ ಸಿಕ್ಕನ್ನು ಬಿಡಿಸಲು ಸಹಾಯ ಮಾಡುತ್ತದೆ. ಬಾಚಣಿಗೆ ಸತ್ತ ಕೂದಲನ್ನು ತೆಗೆಯಲು ಸಹಾಯ ಮಾಡುತ್ತದೆ. ನಂತರ ಹೊಸ ಕೂದಲು ಕಿರುಚೀಲಗಳು ಉಸಿರಾಡುತ್ತವೆ ಎಂಬುದು ತಜ್ಞರ ಅನಿಸಿಕೆ.