ಪಾದ ಒಡೆಯುವುದು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಅದರಲ್ಲೂ ಚಳಿಗಾಲದಲ್ಲಂತೂ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಕೆಲವರಿಗೆ ಪಾದ ಒಡೆದು ರಕ್ತ ಬರುವುದು, ಇದರಿಂದ ಕಾಲು ನೋಡಲು ಅಸಹ್ಯ ಕಾಣುವುದಿರಲಿ, ನಡೆಯುವಾಗ ತುಂಬಾ ನೋವಾಗುತ್ತದೆ. ಪಾದ ಸ್ವಲ್ಪ ಒಡೆದರೆ ಅದಕ್ಕೆ ಕೂಡಲೇ ಚಿಕಿತ್ಸೆ ನೀಡದಿದ್ದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಇದಕ್ಕೆ ಚಿಕಿತ್ಸೆ ಮಾಡುವ ಮುನ್ನ ಈ ರೀತಿ ಏಕೆ ಉಂಟಾಗುತ್ತದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು,. ಪಾದಗಳಲ್ಲಿ ತೇವಾಂಶ ಕಡಿಮೆಯಾದರೆ ಒಣ ತ್ವಚೆಯಿಂದಾಗಿ ಈ ರೀತಿ ಉಂಟಾಗುತ್ತದೆ. ತುಂಬಾ ಹೊತ್ತು ನಿಂತು ಕೆಲಸ ಮಾಡುವವರಲ್ಲಿ ಕೂಡ ಈ ಸಮಸ್ಯೆ ಕಂಡು ಬರುತ್ತದೆ. ಹೆಚ್ಚಿನವರು ಮುಖದ ಆರೈಕೆಗೆ ಕೊಡುವ ಗಮನವನ್ನು ಪಾದಗಳ ಆರೈಕೆಗೆ ಕೊಡುವುದಿಲ್ಲ. ಇದರಿಂದ ಪಾದಗಳಲ್ಲಿ ಬಿರುಕು ಕಂಡು ಬರುತ್ತದೆ.
ಒಡೆದ ಪಾದಗಳಿಗೆ ಚಿಕಿತ್ಸೆ ಮಾಡುವಾಗ ಯಾವ ರೀತಿ ನಿಮ್ಮ ಪಾದ ಒಡೆದಿದೆ ಅದರ ಆದರ ಮೇಲೆ ಮಾಡಿ. ಪಾದಗಳು ಸ್ವಲ್ಪಒಡೆದರೆ ಏನು ಮಾಡಬೇಕು ತುಂಬಾ ಒಡೆದಿದ್ದರೆ ಹೇಗೆ ಹೋಗಲಾಡಿಸಬೇಕು ಅನ್ನುವುದನ್ನು ಇಲ್ಲಿ ಹೇಳಲಾಗಿದೆ. ಈ 5 ಪರಿಣಾಮಕಾರಿ ಮನೆ ಮದ್ದನ್ನು ಪಾಲಿಸಿದ್ದೇ ಆದರೆ ಸುಂದರ ಪಾದಗಳ ಒಡೆಯರು ನೀವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.ಈ ಮಾಸ್ಕ್ ಮಾಡಿದರೆ ಪಾದಗಳು ಒಡೆಯುವುದಿಲ್ಲ, ಒಂದು ವೇಳೆ ಪಾದಗಳಲ್ಲಿ ಬಿರುಕು ಇದ್ದರೆ ಗುಣಮುಖವಾಗುವುದು. 1 ಚಮಚ ನಿಂಬೆರಸ 2 ಚಮಚ ಉಪ್ಪು 1 ಚಮಚ ಗ್ಲಿಸೆರಿನ್ 3-4 ಹನಿರೋಸ್ ವಾಟರ್ ಅನ್ನು ಹದ ಬಿಸಿ ನೀರಿನಲ್ಲಿ ಹಾಕಿ 10ರಿಂದ 15 ನಿಮಿಷ ಕಾಲ ಇಡಬೇಕು. ನಂತರ ಪಾದಗಳನ್ನು ಸ್ಕ್ರಬ್ ಮಾಡಿ ಕಾಲು ತೊಳೆಯಬೇಕು. ನಂತರ ರಾತ್ರಿ ಹಚ್ಚಿ ಮಲಗಬೇಕು. ನಂತರ ಬೆಳಗ್ಗೆ ಎದ್ದು ಪಾದಗಳನ್ನು ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡಿದರೆ ಪಾದಗಳಲ್ಲಿ ಬಿರುಕು ಕಂಡು ಬರುವುದಿಲ್ಲ.
ತೆಂಗಿನೆಣ್ಣೆ, ಹರಳೆಣ್ಣೆ ಇವುಗಳನ್ನು ಮಿಶ್ರಣ ಮಾಡಿ ಪಾದಗಳಿಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಬೇಕು. ಈ ರೀತಿ ಪ್ರತಿದಿನ ಮಾಡಿದರೆ ಈ ಚಳಿಗಾಲದಲ್ಲಿ ಪಾದಗಳು ಒಡೆಯುವ ಸಮಸ್ಯೆ ನಿಮಗಿರುವುದಿಲ್ಲ.ಒಂದು ಹಣ್ಣಾದ ಬಾಳೆಹಣ್ಣನ್ನು ತೆಗೆದುಕೊಂಡು ಹಿಸುಕಬೇಕು, ನಂತರ ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ ನಂತರ ಸ್ವಲ್ಪ ಪಪ್ಪಾಯಿ ಮತ್ತು ಸ್ವಲ್ಪ ಬೆಣ್ಣೆ ಹಣ್ಣನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ತೆಂಗಿನ ಕಾಯಿಯ ಹಾಲನ್ನು ಹಿಂಡಿ ಮಿಶ್ರಣ ಮಾಡಬೇಕು. ಈಗ ಈ ಮಿಶ್ರಣವನ್ನು ಪಾದಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಪಾದಗಳನ್ನು ತೊಳೆಯಬೇಕು. ಈ ಫ್ರೂಟ್ ಮಾಸ್ಕ್ ಅನ್ನು ತ್ವಚೆಗೆ ಹಚ್ಚಿದರೆ ತ್ವಚೆ ಒಡೆಯುವ ಸಮಸ್ಯೆ ಕಂಡು ಬರುವುದಿಲ್ಲ.