ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿರುತ್ತದೆ. ಅದರಲ್ಲೂ ಚೀಸ್ನಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕಂಡು ಬರುತ್ತದೆ. ಇದನ್ನು ಕೂಡ ಆಹಾರದಲ್ಲಿ ಬಳಸಿಕೊಳ್ಳುವುದರಿಂದ ಮೂಳೆಗಳನ್ನು ಬಲಗೊಳಿಸಬಹುದು. ಮನುಷ್ಯ ಆರೋಗ್ಯವಂತನಾಗಿ ಇರಬೇಕೆಂದರೆ ದೇಹದ ಮೂಳೆಗಳು ಗಟ್ಟಿಮುಟ್ಟಾಗಿರಬೇಕು. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ಮೂಳೆಗಳ ಬಲ ಕುಗ್ಗುತ್ತದೆ. ಇದರಿಂದ ಕೀಲು ನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಕ್ಯಾಲ್ಸಿಯಂ ಹೊಂದಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಸ್ನಾಯು ಸಮಸ್ಯೆಗೆ ಪರಿಹಾರ ಕಾಣಬಹುದು. ಅಂತಹ ಪದಾರ್ಥಗಳು ಯಾವುವು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಸಮೃದ್ಧವಾಗಿರುತ್ತದೆ. ದಿನನಿತ್ಯ ಹಾಲನ್ನು ಕುಡಿಯುವುದರಿಂದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದಲ್ಲದೆ, ಮೂಳೆಗಳನ್ನು ಬಲಿಷ್ಠಗೊಳಿಸಿಕೊಳ್ಳಬಹುದು.
ಕಿತ್ತಲೆ ಹಣ್ಣನ್ನು ಕ್ಯಾಲ್ಸಿಯಂನ ಮೂಲ ಎನ್ನಲಾಗುತ್ತದೆ. ಒಂದು ಕಿತ್ತಲೆ ಹಣ್ಣಿನಲ್ಲಿ 60 ಮಿ.ಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಅಷ್ಟೇ ಅಲ್ಲದೆ ಕಿತ್ತಲೆಯಲ್ಲಿ ವಿಟಮಿನ್ ಡಿ ಮತ್ತು ಸಿಟ್ರಿಸ್ ಅಂಶ ಸಹ ಕಂಡು ಬರುವುದರಿಂದ ಇದು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.ಬಾದಾಮಿ ಬೀಜಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಒಂದು ಕಪ್ ಹುರಿದ ಬಾದಾಮಿಯಲ್ಲಿ 457 ಮಿಲಿ ಗ್ರಾಂ ಕ್ಯಾಲ್ಸಿಯಂ ಹೊಂದಿರುತ್ತದೆ. ಇದು ಮೂಳೆಗಳನ್ನು ಗಟ್ಟಿಗೊಳಿಸುವುದಲ್ಲದೆ ಇದರಲ್ಲಿರುವ ಪ್ರೋಟೀನ್ ಅಂಶ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿನಿತ್ಯ ಅಂಜೂರವನ್ನು ತಿನ್ನುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಅಂಶವನ್ನು ಹೆಚ್ಚಿಸಿಕೊಳ್ಳಬಹುದು. ಸಾಮಾನ್ಯವಾಗಿ ಒಂದು ಕಪ್ ಅಂಜೂರದಲ್ಲಿ 242 ಮಿಲಿ ಗ್ರಾಂ ಕಂಡು ಬರುತ್ತದೆ. ಈ ಹಣ್ಣಿನ ನಿರಂತರ ಸೇವನೆಯಿಂದ ಎಲುಬುಗಳನ್ನು ಬಲಗೊಳಿಸಬಹುದು. ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಂಶಗಳು ಸಮೃದ್ಧವಾಗಿರುತ್ತದೆ. ಕೆಲವರು ಹಾಲಿನ ರುಚಿ ಇಷ್ಟಪಡುವುದಿಲ್ಲ. ಅಂತವರು ಆಹಾರದಲ್ಲಿ ಮೊಸರನ್ನು ಬಳಸುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಸರಿದೂಗಿಸಿಕೊಳ್ಳಬಹುದು.