ಪ್ರತಿಯೊಬ್ಬ ಪೋಷಕರು ಸಹ ತಮ್ಮ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಬೇಕೆಂದೇ ಬಯಸುತ್ತಾರೆ. ಹೀಗಾಗಿ ಚಿಕ್ಕಂದಿನಲ್ಲಿ ಮಕ್ಕಳ ನಡವಳಿಕೆಗಳನ್ನು ತಿದ್ದಲು, ಉತ್ತಮ ವ್ಯಕ್ತಿತ್ವ ವನ್ನು ರೂಪಿಸಲು ಪ್ರಯತ್ನಿಸುತ್ತಾರೆ. ಆದರೆ ಮಕ್ಕಳನ್ನು ಅತಿ ಮುದ್ದಿನಿಂದ ಬೆಳೆಸುವ ಇವತ್ತಿನ ಪೋಷಕರ ಮನಸ್ಥಿಯೇ ಅವರಿಗೆ ಮುಳುವಾಗುತ್ತಿದೆ. ಹೆಚ್ಚಿನ ಮಕ್ಕಳು ಹಠಮಾರಿತನ, ಅಶಿಸ್ತಿನ ಸ್ವಭಾವವನ್ನು ರೂಢಿಸಿಕೊಂಡಿರುತ್ತಾರೆ. ಹಿರಿಯರಿಗೆ ಅಗೌರವ ತೋರುವುದು, ರೂಡ್ ಆಗಿ ಮಾತನಾಡುವ ಸ್ವಭಾವವನ್ನು ಬೆಳೆಸಿಕೊಂಡಿರುತ್ತಾರೆ. ಪೋಷಕರು ಸಹ ಮಕ್ಕಳ ಬೇಡಿಕೆಗಳಿಗೆ ಮಣಿಯುವುದು, ಅವರ ಹಠಮಾರಿತನವನ್ನು ಪ್ರೋತ್ಸಾಹಿಸುವುದು ಮಾಡುತ್ತಿರುತ್ತಾರೆ.

ಇದು ಮಕ್ಕಳ ಸ್ವಭಾವ ಸ್ವಲ್ಪಮಟ್ಟಿಗೆ ಮಿತಿ ಮೀರಲು ಕಾರಣವಾಗಬಹುದು. ಮಕ್ಕಳು ಶಿಸ್ತಿನ ಕೊರತೆಯೊಂದಿಗೆ ಬೆಳೆಯಬಹುದು. ನಿಮ್ಮ ಮಕ್ಕಳು ಈ ಕೆಳಗೆ ಹೇಳಿದಂತೆ ವರ್ತಿಸುತ್ತಿದ್ದರೆ ಇದು ನಿಮ್ಮ ಮಕ್ಕಳ ಸ್ವಭಾವವನ್ನು ತಿದ್ದಲು, ಅವರ ವ್ಯಕ್ತಿತ್ವವನ್ನು ರೂಪಿಸಲು ಸೂಕ್ತ ಸಮಯ. ಮಕ್ಕಳು ಸಾಮಾನ್ಯವಾಗಿ ಎಲ್ಲಾ ಬೇಡಿಕೆಗಳಿಗೂ ಪೋಷಕರಿಂದ ಎಸ್ ಎಂಬ ಉತ್ತರ ಬರಬೇಕೆಂದು ಬಯಸುತ್ತಾರೆ. ತಾವು ಕೇಳಿದ್ದನ್ನೆಲ್ಲಾ ಕೊಡಿಸಬೇಕೆಂದು ನಿರೀಕ್ಷಿಸುತ್ತಾರೆ. ನಿಮ್ಮ ಮಕ್ಕಳು ಸಹ ಹೀಗೆಯೇ ನೋ ಎಂದ ತಕ್ಷಣ ನೆಲದ ಮೇಲೆ ಬಿದ್ದು ಉರುಳಾಡುವುದು, ಅಳುವುದು ಮಾಡುತ್ತಿದ್ದರೆ ಅವರ ವ್ಯಕ್ತಿತ್ವದ ಬಗ್ಗೆ ಮರುಪರಿಶೀಲಿಸಬೇಕು. ಅಗತ್ಯತೆ, ಅನಗತ್ಯತೆಯ ಬಗ್ಗೆ ಮಕ್ಕಳಿಗೆ ಹೇಳಿ ಕೊಡಬೇಕು.

ಇವತ್ತಿನ ಮಕ್ಕಳು ಆತ್ಮಸಾಕ್ಷಿಯಿಲ್ಲದೆ ವರ್ತಿಸುವುದನ್ನು ನೋಡುವುವಾಗ ತುಂಬಾ ಗಾಬರಿಯಾಗುತ್ತದೆ. ತಪ್ಪು ಮಾಡಿದ ಮೇಲೆಯೂ ಮಕ್ಕಳಿಗೆ ತಪ್ಪಿತಸ್ಥರೆಂಬ ಭಾವನೆ ಮೂಡದಿದ್ದಲ್ಲಿ ಇದು ತುಂಬಾ ಅಪಾಯಕಾರಿಯಾಗಿದೆ. ಇದು ಅಶಿಸ್ತಿನ ಕೊರತೆಯೂ ಹೌದು. ಹೀಗಾಗಿ ಈ ರೀತಿಯ ವರ್ತನೆಗೆ ಮತ್ತೊಬ್ಬರ ಮನಸ್ಸಿಗೆ ಎಷ್ಟು ನೋವಾಗುತ್ತದೆ ಎಂಬುದನ್ನು ತಿಳಿಸಿಕೊಡಿ. ನಿಮ್ಮ ಮಗು ತನ್ನ ತಪ್ಪಿಗಾಗಿ ಇತರ ಮಕ್ಕಳನ್ನು ದೂಷಿಸಿದರೆ, ಇದು ಮಗುವಿನ ಶಿಸ್ತಿನ ಕೊರತೆಯ ಬಗ್ಗೆ ಸೂಚಿಸುತ್ತದೆ. ಹೀಗಾಗಿ ತಪ್ಪು ಮಾಡಿದಾಗ ಒಪ್ಪಿಕೊಳ್ಳಲು, ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮಕ್ಕಳಿಗೆ ಕಲಿಸಿ ಕೊಡಿ. ತಪ್ಪು ಮಾಡುವುದು ಸಹಜ, ತಿದ್ದಿ ನಡೆಯಬೇಕೆಂಬುದನ್ನು ತಿಳಿಸಿಕೊಡಿ. ಮಕ್ಕಳ ಆಯ್ಕೆಗಳಿಗೆ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಅವರಿಗೆ ಕಲಿಸಿ ಇದು ಅವರಿಗೆ ಜವಾಬ್ದಾರಿ ಯನ್ನು ಸ್ಪಷ್ಟವಾಗಿಸುತ್ತದೆ.

Leave a Reply

Your email address will not be published. Required fields are marked *