ನಮಸ್ತೆ ಪ್ರಿಯ ಓದುಗರೇ, ನಮ್ಮ ಭಾರತ ದೇಶವನ್ನು ಸಾಂಬಾರ ಪದಾರ್ಥಗಳ ತವರು ಮನೆ ಅಂತ ಕರೆಯುತ್ತಾರೆ. ನಮ್ಮ ದೇಶವು ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿ ಕೂಡ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಬ್ರಿಟಿಷರು ನಮ್ಮ ದೇಶಕ್ಕೆ ಬಂದು ಕೇವಲ ಸಂಪತ್ತನ್ನು ದೋಚಿಕೊಂಡು ಹೋಗುವುದಲ್ಲದೆ ಅವರು ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡಿ ಆದಾಯ ಗಳಿಸಿ ವ್ಯಾಪಾರ ವೃದ್ಧಿಸಿಕೊಂಡರು.
ಹೌದು ಈ ಮಸಾಲೆ ಪದಾರ್ಥಗಳು ನಮ್ಮ ಭಾರತ ದೇಶದಿಂದಲೇ ಇನ್ನಿತರ ದೇಶಗಳಿಗೆ ರಫ್ತಾಗುತ್ತಿದ್ದವು. ಚಕ್ಕೆ ಲವಂಗ ಏಲಕ್ಕಿ ಮೆಣಸು ಕಾಳು, ಪಲಾವ್ ಎಲೆ ಇನ್ನಿತರ ಮಸಾಲೆ ಪದಾರ್ಥಗಳಿಗೆ ಉದಾಹರಣೆ ಆಗಿವೆ. ಮಸಾಲೆ ಪದಾರ್ಥಗಳನ್ನು ಮೊದಲಿನ ಕಾಲದಿಂದಲೂ ನಮ್ಮ ಹಿರಿಯರು ಬಳಕೆ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ಆಯುರ್ವೇದದಲ್ಲಿ ಮಸಾಲೆ ಪದಾರ್ಥಗಳಿಗೆ ಅದ್ಭುತವಾದ ಬೆಲೆ ಕೂಡ ಇದೆ.
ಅಷ್ಟೇ ಅಲ್ಲದೇ ಇವುಗಳು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಪ್ರತಿಯೊಂದು ಸಾಂಬಾರ ಪದಾರ್ಥಗಳಲ್ಲಿ ಆರೋಗ್ಯಕರ ಗುಣಗಳು ಅಡಗಿವೆ. ಅದರಲ್ಲಿ ಲವಂಗ ಕೂಡ ಒಂದಾಗಿದೆ. ಈ ಲವಂಗ ಪ್ರಪಂಚದಾದ್ಯಂತ ವ್ಯಾಪಕವಾಗಿ ಮತ್ತು ಪ್ರಸಿದ್ಧವಾಗಿ ದೊರೆಯುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಲವಂಗವನ್ನು ನಿತ್ಯವೂ ಸೇವನೆ ಮಾಡುವುದರಿಂದ ಯಾವೆಲ್ಲ ಲಾಭಗಳು ದೊರೆಯುತ್ತವೆ ಅಂತ ತಿಳಿದುಕೊಳ್ಳೋಣ ಬನ್ನಿ.
ಲವಂಗದಲ್ಲಿ ಸೂಕ್ಷ್ಮಾಣು ಜೀವಿ ವಿರೋಧಕ ಗುಣಗಳು ಅಡಗಿವೆ. ಲವಂಗ ಸೆಳೆತ ನಿಶ್ಯಕ್ತಿ ನೋವು ಆಯಾಸ ಮತ್ತು ಭೇಧಿಯನ್ನು ಉಂಟು ಮಾಡುವ ಜೀವಿಗಳನ್ನು ತಡೆಯುತ್ತವೆ. ಲವಂಗದಲ್ಲಿ ಬ್ಯಾಕ್ಟೀರಿಯಾ ಗುಣಗಳು ಇವೆ. ಇದರಿಂದ ನಾವು ಬಾಯಿಯ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಲವಂಗವನ್ನು ಹಲ್ಲು ನೋವು ಒಸಡುಗಳ ನೋವನ್ನು ನಿವಾರಿಸಲು ಉಪಯೋಗ ಮಾಡಲಾಗುತ್ತದೆ. ಇದರಿಂದ ಹಲ್ಲು ನೋವು ಕ್ರಮೇಣ ಕಡಿಮೆ ಆಗುತ್ತದೆ ಇನ್ನು ಲವಂಗದ ಎಣ್ಣೆಯನ್ನು ಒಂದು ಹತ್ತಿಯಲ್ಲಿ ಹಾಕಿ ಅದನ್ನು ಹಲ್ಲುಗಳ ಮೇಲೆ ಇಡುವುದರಿಂದ ಹಲ್ಲು ನೋವು ಉಪಶಮನ ಆಗುತ್ತದೆ.
ಹಾಗೆಯೇ ಒಂದೆರಡು ಲವಂಗ ಎಣ್ಣೆಯ ಹನಿಯನ್ನು ಟೂತ್ ಪೇಸ್ಟ್ ನಲ್ಲಿ ಹಾಕಿ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲಿಗೆ ಸಂಭಂದ ಪಟ್ಟ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಇನ್ನು ಸಕ್ಕರೆ ಕಾಯಿಲೆ ಇದ್ದವರು ಲವಂಗ ಸೇವನೆ ಉತ್ತಮ. ಏಕೆಂದರೆ ದೇಹದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರದಲ್ಲಿಡಲು ಸಹಾಯ ಮಾಡುತ್ತದೆ. ಲವಂಗದಲ್ಲಿ ನೈಜೇರಿಕಾ ಎಂಬ ಅಂಶವು ಅಸ್ತಮಾ ಮತ್ತು ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ.
ಏಕೆಂದರೆ ಈ ನೈಜೇರಿಕಾ ಎಂಬ ಅಂಶವು ಸಕ್ಕರೆಯ ಅಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಇದು ಇನ್ಸುಲಿನ್ ದೇಹದಲ್ಲಿ ಉತ್ಪತ್ತಿ ಮಾಡಲು ನೆರವಾಗುತ್ತದೆ. ಹಾಗೆಯೇ ಇದರಿಂದ ಮಧುಮೇಹ ರೋಗವು ನಿಯಂತ್ರಣದಲ್ಲಿ ಬರುತ್ತದೆ. ಇನ್ನು ಅಡುಗೆ ಮನೆಯಲ್ಲಿ ಸಿಗುವ ಈ ಲವಂಗವು ಶೀತ ನೆಗಡಿ ಕೆಮ್ಮು ಸಮಸ್ಯೆಗೆ ರಾಮಬಾಣ ಅಂತ ಹೇಳಬಹುದು. ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ 4-5 ಹನಿ ಲವಂಗದ ಎಣ್ಣೆಯನ್ನು ಹಾಕಿ ಕುಡಿದರೆ ಶೀತ ನಿವಾರಣೆ ಮಾಡುತ್ತದೆ.
ಅಷ್ಟೇ ಅಲ್ಲದೇ ಲವಂಗವನ್ನು ಜಗಿದು ತಿನ್ನುವುದರಿಂದ ಬಿಟ್ಟು ಬಿಡದಂತೆ ಕಾಡುವ ಕೆಮ್ಮು ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ದೂರ ಮಾಡುತ್ತದೆ. ಇನ್ನು ಕೆಲವರಿಗೆ ಪ್ರಯಾಣ ಮಾಡುವಾಗ ವಾಕರಿಕೆ ಆಗುತ್ತಿರುತ್ತದೆ. ಅಂಥವರು ಪ್ರಯಾಣ ಮಾಡುವಾಗ ಲವಂಗವನ್ನು ಬಾಯಲ್ಲಿ ಜಗಿಯುತ್ತಾ ಬಂದರೆ ವಾಕರಿಕೆ ಆಗುವ ಹಾಗೆ ಅನ್ನಿಸುವುದಿಲ್ಲ. ಇನ್ನೂ ಕೆಲವರಿಗೆ ದೇಹದಲ್ಲಿ ಪಿತ್ತವಾಗಿ ವಾಕರಿಕೆ ಬರುವ ಹಾಗೆ ಆಗುತ್ತದೆ. ಅಂಥವರು ಲವಂಗವನ್ನು ಸೇವಿಸಬೇಕು. ಇನ್ನು ಬಾಯಿಯ ದುರ್ವಾಸನೆ ಹೆಚ್ಚಾಗಿ ಬರುತ್ತಿದ್ದರೆ, ನಿತ್ಯವೂ ಒಂದು ಲವಂಗ ಮತ್ತು ಏಲಕ್ಕಿಯನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ.