Kantara ಸಿನಿಮಾದ ಸಣ್ಣ ಸಣ್ಣ ಆಯಕ್ಷನ್, ಡಯಲಾಗ್, ಮೂವ್ಮೆಂಟ್ಗಳು ಕೂಡಾ ವಿಶೇಷ ಅರ್ಥವನ್ನು ಕೊಡುತ್ತವೆ. ಇದೇ ದೃಷ್ಟಿಕೋನದಲ್ಲಿ ಸಿನಿಮಾ ನೋಡುವಾಗ ಕಾಣುವ ಮೊದಲ ವಿಶೇಷತೆ ರಾಜ ಕಾಡಿಗೆ ಬರುವಾಗ ಅವನಿಗಾಗುವ ಅನುಭವ. ಹಾಗಿದ್ರೆ ಮುಂದೇನಾಗುತ್ತೆ? ರಾಜಾನಿಗಾದ ಆ ಅನುಭವಕ್ಕೆ ಕಾರಣವೇನು ? ಸುಧೀರ್ ಸಾಗರ್ ಎಂಬುವವರು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದಿದ್ದಾರೆ. ನಿಮ್ಮ ಮಾಹಿತಿಗಾಗಿ ಅದನ್ನೇ ಇಲ್ಲಿ ಪ್ರಕಟಿಸುತ್ತಿದ್ದೇವೆ.rishab shetty
ಅಶಾಂತಿಯಿಂದ ಇದ್ದ ರಾಜನಿಗೆ ಕಾಡಿನಲ್ಲಿ ಸಮಾಧಾನ ಸಿಗುತ್ತದೆ. ಒಂದು ಕಲ್ಲನ್ನು ನೋಡಿದ ರಾಜನಿಗೆ ವಿಶೇಷ ಅನುಭವವಾಗುತ್ತದೆ. ಅಮ್ಮ ಪ್ರೀತಿಯಿಂದ ಕರೆದ ಹಾಗೆ, ಮಾವ ತಬ್ಬಿಕೊಂಡ ಅನುಭವ. ಇಲ್ಲಿ ಅಮ್ಮ , ಮಾವನನ್ನು ವಿವರಿಸಿದ ನಂತರ ಅಪ್ಪನನ್ನು ಯಾಕೆ ಬಿಟ್ಟ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಲ್ಲೇ ಇರುವುದು ನೋಡಿ ಕರಾವಳಿಯ ಮನೆತನದ, ಒಡೆತನದ ರಹಸ್ಯ.
ನೆಮ್ಮದಿಯನ್ನು ಅರಸುತ್ತಾ ಹೊರಟ ರಾಜನಿಗೆ ದೂರದಲ್ಲೆಲ್ಲೋ ಗಗ್ಗರ ಸದ್ದು ಕೇಳಿಸುತ್ತದೆ. ನಿರ್ಜನ ಪ್ರದೇಶದಲ್ಲಿ ಆ ಸದ್ದು ಕೇಳಿದರೂ ರಾಜನಿಗೆ ಭಯವೇ ಆಗುವುದಿಲ್ಲ. ಬದಲಾಗಿ ಅಮ್ಮ ಪ್ರೀತಿಯಿಂದ ತಬ್ಬಿಕೊಂಡ ಹಾಗೆ, ಮಾವ ಪ್ರೀತಿಯಿಂದ ಕರೆದ ಹಾಗೆ ಅನುಭವಾಗುತ್ತದೆ. ಅಲ್ಲಿ ಒಂದು ಕಲ್ಲು ಕಾಣಿಸುತ್ತದೆ. ಆಗ ಅಮ್ಮ ತಬ್ಬಿಕೊಂಡ ಹಾಗೆ, ಮಾವ ಪ್ರೀತಿಯಿಂದ ತಲೆ ಸವರಿದ ಹಾಗೆ ಅನುಭವಾಗುತ್ತದೆ.
ಕರಾವಳಿಯಲ್ಲಿ ಬಹುತೇಕ ಎಲ್ಲರಲ್ಲೂ ಸೋದರ ಮಾವನಿಗೆ ವಿಶೇಷ ಸ್ಥಾನವಿದೆ. ತಾಯಿಯ ಅಣ್ಣ ಅಥವಾ ತಮ್ಮ ಹಿರಿಯರಾದರೂ ಕಿರಿಯರಾದರೂ ಅವರ ಮೇಲಿರುವ ಜವಾಬ್ದಾರಿ ದೊಡ್ಡದು. ಶೆಟ್ಟಿ ಸಮುದಾಯ ಮಾತ್ರವಲ್ಲದೆ ಹೆಚ್ಚಿನ ಸಮುದಾಯದಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಈಗಲೂ ಅನುಸರಿಸಲಾಗುತ್ತದೆ.
ಮನೆಯ ಮುಖ್ಯಸ್ಥೆ ಅಮ್ಮನದ್ದಾಗುತ್ತದೆ. ಅಮ್ಮನ ಅಣ್ಣ-ತಮ್ಮ ಕುಟುಂಬದ ಯಜಮಾನ ಹಾಗೂ ಮುಖಂಡನಾಗುತ್ತಾನೆ. ಕುಟುಂಬದ ಕಾರ್ಯಕ್ರಮ, ಮದುವೆ, ಇತರ ಕಾರ್ಯಗಳಲ್ಲಿ ಮಾವನ ಮೇಲ್ವಿಚಾರಣೆ ಇರಲೇಬೇಕು. ಜಗಳ, ಕುಟುಂಬ ಕಲಹ ಸರಿ ಮಾಡುವುದು ಮಾವನ ಜವಾಬ್ದಾರಿ. ಇದು ಅಳಿಯಕಟ್ಟು ಪದ್ಧತಿ ಎಂದೇ ಪ್ರಸಿದ್ಧ.
ಮಾವನಾದವನು ಅಕ್ಕ ಹಾಗೂ ಅಕ್ಕನ ಮಕ್ಕಳನ್ನು ತನ್ನ ಮಕ್ಕಳಿಗಿಂತಲೂ ಹೆಚ್ಚು ಜವಾಬ್ದಾರಿ ಹಾಗೂ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಸೋದರ ಮಾವ ಹೆಮ್ಮೆಯಿಂದ ಅಕ್ಕನ ಮಕ್ಕಳ ಮದುವೆ ಮಾಡುತ್ತಾನೆ, ಕಿವಿ ಚುಚ್ಚಿಸುತ್ತಾನೆ. ಹಾಗೆ ಅಪ್ಪನ ಸ್ಥಾನದಲ್ಲಿದ್ದು ಮಾಡಬೇಕಾದ ಬಹುತೇಕ ಎಲ್ಲ ಜವಾಬ್ದಾರಿಗಳು ಇಲ್ಲಿ ಮಾವನ ಹೆಗಲಿಗೆ ಬೀಳುತ್ತದೆ.